ರಾಯಚೂರು: ಧರಿಸಿದ್ದ ಪ್ಯಾಂಟ್ ಕಳಚಿ ತಲೆಮೇಲೆ ಹೊತ್ತು ಹಳ್ಳದಾಟಿ ಶಾಲೆಗೆ ಹೋಗುವ ಮನಕಲಕುವ ದೃಶ್ಯ ಸಿಂಧನೂರು ತಾಲೂಕಿನ ದೇವರಗುಡಿ ಗ್ರಾಮದಲ್ಲಿಕಂಡುಬಂದಿದೆ.
ಶಾಲೆಗೆ ಹೋಗಬೇಕಾದರೆ ಕೈಯಲ್ಲಿ ಬ್ಯಾಗ್,ಚಪ್ಪಲಿ ಹಿಡಿದು ಅರೆಬೆತ್ತಲೆಯಾಗಿ ಹಳ್ಳ ದಾಟಬೇಕೆಂಬ ಕಾರಣದಿಂದ ಇಲ್ಲಿನ ಮಕ್ಕಳಲ್ಲಿ ಹೆಚ್ಚಿನವರು ಶಾಲೆ ತೊರೆದಿದ್ದು, ಅವರಲ್ಲಿ ಹೆಣ್ಮಕ್ಕಳೇ ಹೆಚ್ಚು.
“ನಮ್ಮ ಮನೆಯ ಹೆಣ್ಣು ಮಕ್ಕಳು ಶಾಲೆ ಕಲೀಬೇಕು ಅಂತ ಆಸೆ ಇದೆ. ಇಂತಹ ದುಸ್ಥಿತಿ ಕಾರಣ ಹೇಗೆ ಕಳುಹಿಸಬೇಕು ಎಂದು ಗೊತ್ತಾಗುತ್ತಿಲ್ಲ. ರಾಜಕಾರಣಿಗಳಲ್ಲಿ ಮನವಿ ಮಾಡಿ ಸಾಕಾಯ್ತು. ಇನ್ನೂ ಸಮಸ್ಯೆಗಳು ಹಾಗೆಯೇ ಇವೆ ಎಂದು ಪೋಷಕರೊಬ್ಬರು ಅಳಲು ತೋಡಿಕೊಂಡರು.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ SFI ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಮ್ಯಾಗಳಮನಿ, ಹಳ್ಳವನ್ನು ದಾಟಿ ಶಾಲೆ-ಕಾಲೇಜುಗಳಿಗೆ ತೆರಳಬೇಕು. ಪಟ್ಟಣಕ್ಕೆ ತೆರಳಲು ಸೂಕ್ತ ರಸ್ತೆ ಇಲ್ಲದೆ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಜನರ ಮತ್ತು ಶಿಕ್ಷಣದ ಬಗ್ಗೆ ಕಾಳಜಿ ಇಲ್ಲದ ಶಾಸಕರು, ರಾಜಕಾರಣಿಗಳು ಇತ್ತ ಗಮನ ಹರಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಇನ್ನೂ ರಸ್ತೆ ಸಂಪರ್ಕ ಆಗದಿರುವುದು ಸರಕಾರಗಳ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಈ ಗ್ರಾಮಕ್ಕೆ ಬಂದು ಮತ ಕೇಳುವ ರಾಜಕಾರಣಿಗಳು ನೈತಿಕತೆಯನ್ನೊಮ್ಮೆ ಪ್ರಶ್ನಿಸಿಕೊಳ್ಳಬೇಕಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಇಂತಹವುಗಳಿಗೆ ಹಣ ಖರ್ಚು ಮಾಡುತ್ತಿಲ್ಲ. ಬದಲಾಗಿ ಚನ್ನಾಗಿರುವ ರಸ್ತೆ ಅಗೆದು ಹಣ ಪೋಲು ಮಾಡುತ್ತಿದ್ದಾರೆ.ಇನ್ನಾದರೂ ಸರಕಾರ, ಜಿಲ್ಲಾಡಳಿತ ಈ ಗ್ರಾಮಕ್ಕೆ ರಸ್ತೆ ಸಂಪರ್ಕ, ಸಾರಿಗೆ ವ್ಯವಸ್ಥೆಯನ್ನು ಮಾಡಿ ಮಕ್ಕಳ ಶಿಕ್ಷಣವನ್ನು ಉಳಿಸುವ ಕೆಲಸಕ್ಕೆ ಮುಂದಾಗಬೇಕಿದೆ ಎಂದು ಜನಪರ ಸಂಘಟನೆಗಳು ಆಗ್ರಹಿಸಿವೆ.