ಬೆಂಗಳೂರು: ಮಾಜಿ ಕಾರ್ಪೊರೇಟರ್ ನಾಝಿಮಾ ಖಾನ್ ಅವರ ಪತಿ ಅಯೂಬ್ ಖಾನ್ ಅವರನ್ನು ಚಾಕುವಿನಿಂದ ಇರಿದು ಕೊಲೆಗೈದು ಪರಾರಿಯಾಗಿದ್ದ ಆರೋಪಿ ಮತೀನ್ ಖಾನ್ ನನ್ನು ಚಾಮರಾಜಪೇಟೆ ಪೊಲೀಸರು ಬಂಧಿಸಿದ್ದಾರೆ.
ಕಳೆದ ಜ. 13 ರಂದು ಚಾಮರಾಜಪೇಟೆ ಬಳಿಯ ಟಿಪ್ಪು ನಗರದ ಮಾಜಿ ಕಾರ್ಪೋರೇಟರ್ ನಾಝಿಮಾ ಖಾನ್ ಪತಿ ಆಯೂಬ್ ಖಾನ್ ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಮತೀನ್ ಖಾನ್, ಕೆಂಗೇರಿ ಬಳಿ ಅಡಗಿದ್ದ ಖಚಿತವಾದ ಮಾಹಿತಿ ಆಧರಿಸಿ ಕಾರ್ಯಾಚರಣೆ ಕೈಗೊಂಡು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಕೊಲೆಯಾದ ಅಯೂಬ್ ಖಾನ್ ಅವರ ಅಣ್ಣನ ಮಗನಾದ ಆರೋಪಿ ಮತೀನ್ ಖಾನ್ ಕಳೆದ 4 ದಿನಗಳಿಂದ ಮಂಡ್ಯ, ರಾಮನಗರ, ಕೋಲಾರ ಸೇರಿದಂತೆ ಹಲವು ಕಡೆಗಳಲ್ಲಿ ಸುತ್ತಾಡಿಕೊಂಡು ಕೆಂಗೇರಿ ಬಳಿ ಬಂದು ತಲೆಮರೆಸಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದರು.
ಎರಡು ದಿನಗಳ ಹಿಂದಷ್ಟೇ ಅಜ್ಞಾತ ಸ್ಥಳದಿಂದ ಆರೋಪಿ ಮತೀನ್ ಖಾನ್ ವಿಡಿಯೋ ಮಾಡಿ ಹರಿಬಿಟ್ಟಿದ್ದ.
ವೀಡಿಯೋದಲ್ಲಿ “ತನ್ನ ಪತಿ ಹಂತಕರ ತಲೆ ಕಡಿದವರಿಗೆ 10 ಕೋಟಿ ಕೊಡುವುದಾಗಿ ನಾಝಿಮಾ ಘೋಷಿಸಿದ್ದಾರೆ. ಹತ್ತಾರು ವರ್ಷಗಳಿಂದ ಮಸೀದಿಯನ್ನು ಅಭಿವೃದ್ಧಿ ಮಾಡಿದ್ದೆ, ಅಧ್ಯಕ್ಷ ಸ್ಥಾನ ಕೊಡುವೆ ಎಂದು ಹೇಳುತ್ತಲೇ ಬಂದಿದ್ದ ಚಿಕ್ಕಪ್ಪ ಅಯೂಬ್ ಖಾನ್ ಕೊನೆ ಕ್ಷಣದಲ್ಲಿ ತನ್ನ ಮಗನನ್ನು ಅಧ್ಯಕ್ಷನಾಗಿ ಮಾಡಿದ್ದ. ಆಗಲೂ ನಾನು ಸುಮ್ಮನಿದ್ದೆ. ಆದರೆ ಆಯೂಬ್ ಖಾನ್ ಗೆ ನಾನು ಏರಿಯಾದಲ್ಲಿರೋದು ಇಷ್ಟ ಇರಲಿಲ್ಲ. ಇದೇ ಕಾರಣಕ್ಕೆ ಗಲಾಟೆ ತೆಗೆದು ನನಗೆ ತೊಂದರೆ ಕೊಡುತ್ತಿದ್ದು ಕೊಲೆಯಾದ ದಿನ ಕೂಡ ಅಯೂಬ್ ಖಾನ್ ಮತ್ತು ಆತನ ಮಗ ಸೇರಿ ಇಬ್ಬರು ನನ್ನ ಮೇಲೆ ಲಾಂಗ್ ನಿಂದ ಹಲ್ಲೆ ಮಾಡಲು ಮುಂದಾಗಿದ್ದರು. ಪ್ರಾಣ ರಕ್ಷಣೆ ವೇಳೆ ಚಾಕು ತಗುಲಿ ಅಯೂಬ್ ಖಾನ್ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದು ಅದನ್ನು ಆಧರಿಸಿ ಮೊಬೈಲ್ ಕರೆ ವಿಡಿಯೋ ಸುಳಿವಿನ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.