ಕ್ಯಾಂಪಸ್ ಫ್ರಂಟ್ ರ‍್ಯಾಲಿಯನ್ನು ತಡೆಯುವ ಮೂಲಕ ಮಂಗಳೂರು ಪೋಲಿಸರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದ್ದಾರೆ: SDPI ಆರೋಪ

Prasthutha|

- Advertisement -

ಮಂಗಳೂರು: ರಾಷ್ಟ್ರೀಯ ವಿಧ್ಯಾರ್ಥಿ ಸಂಘಟನೆಯಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಇಂದು ಮಂಗಳೂರಿನಲ್ಲಿ `ಆಯ್ಕೆಯ ಸ್ವಾತಂತ್ರ್ಯವನ್ನ ಖಾತ್ರಿ ಪಡಿಸೋಣ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯೋಣ’ ಎಂಬ ಘೋಷಣೆಯೊಂದಿಗೆ ಮಂಗಳೂರಿನ ಪುರಭವನದಲ್ಲಿ ಗರ್ಲ್ಸ್ ಕಾನ್ಫರೆನ್ಸ್ ನಡೆಸಲು ತಿರ್ಮಾನಿಸಿದ್ದು ಅದರ ಪೂರ್ವಭಾವಿಯಾಗಿ ಜ್ಯೋತಿ ವೃತ್ತ ದಿಂದ ರ‍್ಯಾಲಿ ಆಯೋಜಿಸಿದ್ದರು.

ಆದರೆ ಈ ರ‍್ಯಾಲಿಯನ್ನು ತಡೆಯುವ ಮೂಲಕ ಜಿಲ್ಲಾಡಳಿತ ಮತ್ತು ಮಂಗಳೂರು ನಗರ ಪೋಲಿಸರು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸುವ ಸರ್ವಾಧಿಕಾರಿ ಧೋರಣೆಯನ್ನು ಪ್ರದರ್ಶಿಸಿದ್ದಾರೆ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ ಆರೋಪಿಸಿದ್ದಾರೆ.

- Advertisement -

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಮ್ಮ ಹಕ್ಕಿಗಾಗಿ ಹೋರಾಟ ನಡೆಸುವ, ಸಂಘಟನಾತ್ಮಕವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮುಕ್ತ ಅವಕಾಶವಿದೆ. ಆದರೆ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಸರಕಾರದ ಜನವಿರೋಧಿ ನಡೆಗಳನ್ನು ಪ್ರಶ್ನಿಸುವ ವಿಧ್ಯಾರ್ಥಿ ಸಂಘಟನೆ ಸೇರಿದಂತೆ ಹಲವಾರು ಪ್ರಗತಿಪರ ಸಂಘಟನೆಗಳಿಗೆ ಕಾರ್ಯಕ್ರಮ ನಡೆಸಲು ಅನಗತ್ಯ ನಿರ್ಭಂಧಗಳನ್ನು ವಿಧಿಸುವ ಮೂಲಕ ಸರಕಾರ ಹಾಗೂ ಪೋಲಿಸ್ ಇಲಾಖೆ ದುರಹಂಕಾರದ ದೋರಣೆ ಪ್ರದರ್ಶಿಸುತ್ತಿದೆ.

ಇದು ಭವಿಷ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಸಂಪೂರ್ಣವಾಗಿ ಇಲ್ಲದಾಗಿಸುವ ಕುತಂತ್ರವಾಗಿದೆ ಎಂದು ಎಸ್‌ಡಿಪಿಐ ಭಾವಿಸುತ್ತದೆ. ಇದರ ವಿರುದ್ಧ ಎಲ್ಲಾ ಸಮಾನ ಮನಸ್ಕ ಸಂಘಟನೆಗಳು, ಪ್ರಗತಿಪರರು, ಜಾತ್ಯಾತೀತ, ರಾಜಕೀಯ ಪಕ್ಷಗಳು ಧ್ವನಿ ಎತ್ತಬೇಕಾಗಿದೆ.

ಬಿಜೆಪಿ ಹಾಗೂ ಸಂಘಪರಿವಾರಕ್ಕೆ ಸೇರಿದ ಹಲವಾರು ಸಂಘಟನೆಗಳಿಗೆ ಕಾರ‍್ಯಕ್ರಮಗಳನ್ನು ಆಯೋಜಿಸಲು ,ಪ್ರತಿಭಟನೆ, ಸಭೆ ಸಮಾರಂಭ, ರ‍್ಯಾಲಿ, ಜಾಥ ಮಾಡಲು ಯಾವುದೇ ನಿರ್ಭಂದ ವಿಧಿಸದೇ ಮುಕ್ತ ಅವಕಾಶ ಮಾಡಿ ಕೊಡುವ ಪೋಲಿಸ್ ಇಲಾಖೆ ಒಂದು ಕಣ್ಣಿಗೆ ತುಪ್ಪ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ನೀತಿಯನ್ನು ಕೈ ಬಿಡಬೇಕು. ಇಲ್ಲದಿದ್ದಲ್ಲಿ ಪೋಲಿಸ್ ಇಲಾಖೆಯ ಇಬ್ಬಗೆ ನೀತಿಯ ವಿರುದ್ಧ ಹೋರಾಟ ನಡೆಸಬೇಕಾಗಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.



Join Whatsapp