ಕಾರಾಗೃಹಗಳಲ್ಲಿ ದುಡಿಯುತ್ತಿರುವ ಕೈದಿಗಳಿಗೆ ಕನಿಷ್ಠ ಕೂಲಿ ದರ ಪಾವತಿ: ಗೃಹ ಸಚಿವ ಆರಗ ಜ್ಞಾನೇಂದ್ರ

Prasthutha|

ಬೆಂಗಳೂರು: ರಾಜ್ಯದಲ್ಲಿರುವ ಎಲ್ಲಾ ಕಾರಾಗೃಹಗಳಲ್ಲಿ ದುಡಿಯುತ್ತಿರುವ ಕೈದಿಗಳಿಗೆ ರಾಜ್ಯ ಸರಕಾರ ನಿಗದಿ ಪಡಿಸಿರುವ ಕನಿಷ್ಠ ಕೂಲಿ ದರವನ್ನು ನೀಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

- Advertisement -

ಸಚಿವರು ಇತ್ತೀಚೆಗೆ ರಚನೆಯಾದ ಕಾರಾಗೃಹ ಅಭಿವೃದ್ದಿ ಮಂಡಳಿಯ ಪ್ರಥಮ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಈ ಬಗ್ಗೆ ರಾಜ್ಯ ಹಣಕಾಸು ಇಲಾಖೆಗೆ ಪ್ರಸ್ತಾವನೆ ನೀಡಿದ್ದು, ಕೈದಿಗಳು ತಾವು ಮಾಡಿದ ದುಡಿಮೆಗೆ ರಾಜ್ಯ ಸರಕಾರ ಇತ್ತೀಚೆಗೆ ಪರಾಮರ್ಶಿಸಿ ನಿಗದಿ ಪಡಿಸಿದ ಕನಿಷ್ಠ ಕೂಲಿ ದರವನ್ನು ನೀಡಲು ನಿರ್ಧರಿಸಲಾಗಿದೆ ಎಂದರು.

ರಾಜ್ಯ ಹಣಕಾಸು ಇಲಾಖೆ ಇದಕ್ಕಾಗಿ ಏಳು ಕೋಟಿ ರೂಪಾಯಿಗಳ ವಿಶೇಷ ಅನುದಾನ ಬಿಡುಗಡೆ ಪ್ರಕ್ರಿಯೆ ನಡೆಸಿದೆ ಎಂದು ಸಚಿವರು ತಿಳಿಸಿದರು.

- Advertisement -

ಕಾರಾಗೃಹ ಅಭಿವೃದ್ಧಿ ಮಂಡಳಿಯ ಪ್ರಥಮ ಸಭೆ ನಡೆದ ಬಗ್ಗೆ ಪ್ರಸ್ತಾಪಿಸಿದ ಸಚಿವರು, ರಾಜ್ಯದ ವಿವಿಧ ಇಲಾಖೆಗಳು, ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ಆರ್ಥಿಕ ಚಟುವಟಿಕೆಗಳಲ್ಲಿ ಕಾರಾಗೃಹ ಕೈದಿಗಳ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಲು ಅನುವಾಗುವಂತೆ ಯೋಜನೆಗಳನ್ನು ಸಲ್ಲಿಸಲು ಕೋರಲಾಯಿತು.

ಕೇಂದ್ರ ಕಾರಾಗೃಹ ಗಳಲ್ಲಿ ಬಂಧಿಯಾಗಿರುವ ಮಾನವ ಸಂಪನ್ಮೂಲವನ್ನು ರಾಷ್ಟ್ರೀಯ ಸಂಪನ್ಮೂಲವನ್ನಾಗಿ ಪರಿವರ್ತಿಸಲ, ಹಾಗೂ ಈಗಾಗಲೇ ನಡೆಸಲಾಗುತ್ತಿರುವ ಹತ್ತು ಹಲವು ಕೈಗರಿಕಾ ಚಟುವಟಿಕೆಗಳಿಗೆ ಕಾರ್ಪೊರೇಟ್ ಸ್ವರೂಪವನ್ನು ನೀಡುವ ಪ್ರಯತ್ನ ಇದಾಗಿದೆ ಎಂದು ಸಚಿವರು ಹೇಳಿದರು.

ಕಾರಾಗೃಹಗಳಲ್ಲಿ ಪ್ರಸ್ತುತ ನೇಯ್ಗೆ, ಮರಗೆಲಸ, ಬೇಕರಿ, ಜಮಖಾನ, ಶಾಮಿಯಾನ, ಸೋಪ್ ಹಾಗೂ ಇನ್ನಿತರ ಕೈಗಾರಿಕ ಚಟುವಟಿಕೆಗಳು ನಡೆಯುತ್ತಿದ್ದು, ಹಾಲಿ ಇರುವ ಯಂತ್ರೋಪಕರಣಗಳ ಉನ್ನತೀಕರಣ ಕೈದಿಗಳಿಗೆ ವೃತ್ತಿಯಲ್ಲಿ ನೈಪುಣ್ಯತೆ ಒಳಗೊಂಡಂತೆ ಹಲವಾರು ಸುಧಾರಣಾ ಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆಯೂ ಫಲಪ್ರದ ಚರ್ಚೆಯಾಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯ ಕಾರಾಗೃಹಗಳ ಡಿಜಿ ಅಲೋಕ್ ಮೋಹನ್, ರಾಜ್ಯ ಪೊಲೀಸ್ ಮುಖ್ಯಸ್ಥ ಪ್ರವೀಣ್ ಸೂದ್, ರಾಜ್ಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ ಇಲಾಖೆ) ರಜನೀಶ್ ಗೋಯಲ್ ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



Join Whatsapp