ಮಂಗಳೂರು: ‘ ಆಯ್ಕೆಯ ಸ್ವಾತಂತ್ರ್ಯವನ್ನು ಖಾತರಿಪಡಿಸೋಣ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಎತ್ತಿ ಹಿಡಿಯೋಣ’ ಎಂಬ ಘೋಷವಾಕ್ಯದಡಿಯಲ್ಲಿ ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೃಹತ್ “ಗರ್ಲ್ಸ್ ಕಾನ್ಫರೆನ್ಸ್” ಜಾಥಾಕ್ಕೆ ಪೊಲೀಸರು ಅನುಮತಿ ನಿರಾಕರಿಸಿ ಜಾಥಕ್ಕೆ ತಡೆ ಒಡ್ಡಿದ್ದಾರೆ.
ಮಂಗಳೂರಿನ ಮಿಲಾಗ್ರಿಸ್ ಬಳಿ ಜಾಥಾಕ್ಕೆ ಚಾಲನೆ ನೀಡಲು ಕಾರ್ಯಕ್ರಮ ಆಯೋಜಕರು ನಿರ್ಧರಿಸಿದ್ದರು. ಆದರೆ ಪೊಲೀಸರು ಬ್ಯಾರಿ ಕೇಡ್ ಗಳನ್ನು ಇಟ್ಟು ಯಾವುದೇ ಕಾರಣಕ್ಕೂ ಜಾಥಾ ನಡೆಸುವಂತಿಲ್ಲ ಎಂದು ಸೂಚನೆ ನೀಡಿದರು. ಈ ವೇಳೆ ವಿದ್ಯಾರ್ಥಿನಿಯರು ಮತ್ತು ಪೊಲೀಸರ ನಡುವೆ ಮಾತಿಕ ಚಕಮಕಿ ನಡೆಯಿತು.
ಅಪಾರ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿನಿಯರು ಪೊಲೀಸರ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ವಿದ್ಯಾರ್ಥಿಗಳು, ಜಾಥಾ ಮತ್ತು ಸಮಾವೇಶ ನಡೆಸುವುದು ನಮ್ಮ ಸಾಂವಿಧಾನಿಕ ಹಕ್ಕಾಗಿದೆ. ಇಲ್ಲಿಂದ ಪುರಭವನದವರೆಗೆ ಜಾಥಾ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಆದರೆ ಅವರು ಅನುಮತಿ ನೀಡಲು ನಿರಾಕರಿಸಿದರು. ಬಳಿಕ ವಿದ್ಯಾರ್ಥಿನಿಯರು ನೇರವಾಗಿ ಪುರಭವನಕ್ಕೆ ಆಗಮಿಸಿ ಸಮಾವೇಶದಲ್ಲಿ ಪಾಲ್ಗೊಂಡರು.