ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರ ನಡುವೆ ತೆರೆಮರೆಯ ಜಗಳ ಮುಂದುವರಿದಿದೆ. ತಮ್ಮ ಜತೆಗಿರುವ ಶಿವಸೇನೆಯ ಬಂಡಾಯ ಶಾಸಕರು ಮುಂದಿನ ಚುನಾವಣೆಯಲ್ಲಿ ಸೋತರೆ ರಾಜಕೀಯ ತ್ಯಜಿಸುವೆ ಎಂದು ಏಕನಾಥ ಶಿಂಧೆ ಹೇಳಿದ್ದಾರೆ.
ಈ 50 ಮಂದಿ ಶಾಸಕರು ಮುಂದಿನ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ನನಗೆ ಖಾತರಿ ಇದೆ. ಅವರಲ್ಲಿ ಯಾರಾದರೂ ಒಬ್ಬರು ಸೋತರೆ, ರಾಜಕೀಯ ತ್ಯಜಿಸುತ್ತೇನೆ ಎಂದು ಶಿಂಧೆ ಹೇಳಿದ್ದಾರೆ. ವಿಶ್ವಾಸಮತ ಯಾಚನೆ ಸಂದರ್ಭದಲ್ಲಿಯೂ ಶಿಂಧೆ ಇದೇ ರೀತಿಯ ಹೇಳಿಕೆ ನೀಡಿದ್ದರು.
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಇತ್ತೀಚೆಗೆ ಬಂಡಾಯವೆದ್ದಿದ್ದ ಶಿಂಧೆ, ಸರ್ಕಾರದ ಪತನಕ್ಕೆ ಕಾರಣವಾಗಿದ್ದರು. ಬಳಿಕ ಬಿಜೆಪಿ ಜತೆ ಕೈಜೋಡಿಸಿ ಸರ್ಕಾರ ರಚಿಸಿ ಮುಖ್ಯಮಂತ್ರಿಯಾಗಿದ್ದು, ಇದೀಗ ತನ್ನ ಜೊತೆಗಿರುವ ಶಾಸಕರೆಲ್ಲರೂ ಖಚಿತವಾಗಿ ಗೆದ್ದೇ ಗೆಲ್ಲುತ್ತಾರೆ ಎಂದು ಖಾತರಿಪಡಿಸಿದ್ದಾರೆ.