ರಾಜ್ಯದಲ್ಲಿ ಭಿಕ್ಷಾಟನೆ ನಿರ್ಮೂಲನೆಗೆ ಯೋಜನಾ ಬದ್ಧ ಕಾರ್ಯಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ

Prasthutha|

ಬೆಂಗಳೂರು: ರಾಜ್ಯದಲ್ಲಿ ಭಿಕ್ಷಾಟನೆ ಹೆಸರಿನಲ್ಲಿ ಸಾರ್ವನಿಕ ಸ್ಥಳದಲ್ಲಿ ನಿರಂತರ ಜನಸಾಮಾನ್ಯರು ಕಿರಿಕಿರಿ ಅನುಭವಿಸುವುದು ಸೇರಿದಂತೆ ಭಿಕ್ಷಾಟನೆ ನಿರ್ಮೂಲನೆ ಸಂಬಂಧ ಸಮಾಜ ಕಲ್ಯಾಣ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ನೇತತ್ವದಲ್ಲಿ ಇಂದು ವಿಕಾಸಸೌಧದಲ್ಲಿ ಮಹತ್ವದ ಸಭೆ ನಡೆಯಿತು.

- Advertisement -

ನಗರ ಮತ್ತು ಅರೆ ನಗರ ಪ್ರದೇಶಗಳಲ್ಲಿ ಮಕ್ಕಳನ್ನು ಎತ್ತಿಕೊಂಡು ಭಿಕ್ಷಾಟನೆಯಲ್ಲಿ ತೊಡಗಿರುವ ಮಹಿಳೆಯರು, ಪರಿತ್ಯಜಿಸಲ್ಪಟ್ಟ ಮಕ್ಕಳು, ದೌರ್ಜನ್ಯಕ್ಕೊಳಗಾದ ಬೀದಿಯ ಮಕ್ಕಳು, ವಲಸೆ ಬಂದ ಅನಾಥ ಮಕ್ಕಳು ಸೇರಿದಂತೆ ಅನೇಕರು ನಿರಂತರ ಭಿಕ್ಷಾಟನೆಯಲ್ಲಿ ತೊಡಗಿದ್ದು, ಜನಸಂದಣಿಯ ಪ್ರದೇಶಗಳಲ್ಲಿ ತೃತಿಯಲಿಂಗಿಗಳು ಸೇರಿದಂತೆ ವಯಸ್ಕರು ಮತ್ತು ವೃದ್ಧರು ಬಿಕ್ಷಾಟನೆ ಮಾಡುತ್ತಿರುವುದು ಸಾ‍ರ್ವಜನಿಕರಿಗೆ ನಿರಂತರ ಸಮಸ್ಯೆ ಉಂಟಾಗುತ್ತಿದೆ. ಭಿಕ್ಷಾಟನೆ ತಡೆಗಟ್ಟುವ ಕುರಿತು ಮಕ್ಕಳ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ ಸಚಿವ ಕೋಟ ಎಲ್ಲಾ ಇಲಾಖೆಗಳು ಸಮನ್ವಯ ಸಾಧಿಸಿಕೊಂಡು ಭಿಕ್ಷಾಟನೆ ನಿಯಂತ್ರಣ ಮಾಡಬೇಕೆಂದು ಸೂಚಿಸಿದರು.

ವಾಹನ ದಟ್ಟಣೆಯ ಪ್ರದೇಶದಲ್ಲಿ ಹಸುಗೂಸಿಗೆ ನಿದ್ರೆ ಮಾತ್ರೆ ಅಥವಾ ಚುಚ್ಚು ಮದ್ದು ನೀಡಿ ಭಿಕ್ಷಾಟನೆಗೆ ಎಳೆದು ತಂದಿರುವುದು, ಮಕ್ಕಳನ್ನು ದಿನ ಬಾಡಿಗೆಯ ಮೇರೆಗೆ ಭಿಕ್ಷಾಟನೆಯಲ್ಲಿ ತೊಡಗಿಸಿರುವುದು ಸೇರಿದಂತೆ ಏಳೆಯ ಮಕ್ಕಳನ್ನು ಕ್ರೂರವಾಗಿ ನಡೆಸುತ್ತಿರುವುದರ ಕುರಿತು ಉದಾಹರಣೆಗಳೊಂದಿಗೆ ವಿವರಿಸಿದ ಸಚಿವ ಕೋಟ, ಇದನ್ನು ನಿಯಂತ್ರಣಕ್ಕೆ ತರಬೇಕಾದ ಬಗ್ಗೆ ತುರ್ತು ಕಾರ್ಯ ಪ್ರವೃತ್ತರಾಗಬೇಕೆಂದು ಸೂಚಿಸಿದರು.

- Advertisement -

ಭಿಕ್ಷಾಟನೆಯಲ್ಲಿ ತಾಯಿ ಮತ್ತು ಮಗು ಅಥವಾ ಮಗುವಿನೊಂದಿಗೆ ಮಹಿಳೆಯ ಅಥವಾ ವ್ಯಕ್ತಿ ಇದ್ದಲ್ಲಿ ಮಕ್ಕಳ ಕಲ್ಯಾಣ ಇಲಾಖೆ ಕ್ರಮ ಜರುಗಿಸುವುದು ಹಾಗೂ ಕೂಡಲೇ ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಿ ಪುನರ್ ವಸತಿ ಕಲ್ಪಿಸಬೇಕು, ಮಕ್ಕಳನ್ನು ಭಿಕ್ಷಾಟನೆಗೆ ದೂಡುವ ಯಾವುದೇ ವ್ಯಕ್ತಿಗಳ ಮೇಲೆ ಕಠಿಣ ಕ್ರಮ ಜರುಗಿಸಬೇಕು, ರಾಜ್ಯದ 31 ಜಿಲ್ಲೆಗಳಲ್ಲಿ ಮಕ್ಕಳ ರಕ್ಷಣಾ ಸಮಿತಿ ಸಮಪರ್ಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕೆಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟ ನಿರ್ದೇಶನ ನೀಡಿದರು.

ಬೆಂಗಳೂರು ನಗರದಲ್ಲಿರುವ ಮೇಲ್ಸೇತುವೆ, ವಿವಿಧ ಸಿಗ್ನಲ್ ಗಳು, ಪ್ರಮುಖ ದೇವಾಲಯಗಳ ಮುಂಭಾಗ, ಎಲೆಕ್ಟ್ರಾನಿಕ್ ಸಿಟಿ ಸಹಿತ ವಿವಿಧ ಟೋಲ್ ಗೇಟ್ ಗಳು, ಮಾರ್ಕೆಟ್ ಗಳು ಮುಂತಾದವುಗಳನ್ನು ಗುರುತಿಸಿ ಮಕ್ಕಳ ರಕ್ಷಣೆ ಕಾರ್ಯಚರಣೆಗೆ ಇಳಿಯಲು ಸಚಿವರು ಸೂಚಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಕಾ‍ರ್ಯದರ್ಶಿಗಳಾದ ಮೇಜರ್ ಮಣಿವಣ್ಣನ್, ಆಯುಕ್ತರಾದ ರಾಕೇಶ್ ಕುಮಾರ್, ಇಲಾಖೆಯ ಸಲಹೆಗಾರರಾದ ವೆಂಕಟಯ್ಯ, ಮಕ್ಕಳ ರಕ್ಷಣಾ ನಿರ್ದೇಶನಾಲಯದ ನಿರ್ದೇಶಕಿ ಲತಾ ಕುಮಾರಿ, ನಗರಾಭಿವೃದ್ಧಿ ಇಲಾಖೆಯ ಲತಾ, ಐಸೇಕ್ ಪ್ರತಿನಿಧಿ ದಾಸನೂರು ಕೂಸಣ್ಣ, ಕೇಂದ್ರ ಪರಿಹಾರ ಸಮಿತಿಯ ಕಾಯದರ್ಶಿ ಶ್ರೀಮತಿ ಅರ್ಚ ನಾ, ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಇನ್ನಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.



Join Whatsapp