ಬೆಂಗಳೂರು: ಬಿಹಾರ ಪೊಲೀಸರು ಭಯೋತ್ಪಾದಕರೆಂದು ಪ್ರತಿಪಾದಿಸುತ್ತಾ ಇಬ್ಬರು ಮುಸ್ಲಿಮರನ್ನು ಪಾಟ್ನಾದಲ್ಲಿ ಬಂಧಿಸಿದ್ದಾರೆ ಮತ್ತು ಈ ಬಂಧನದೊಂದಿಗೆ ಸಂಪರ್ಕ ಕಲ್ಪಿಸಿ ಪಾಪ್ಯುಲರ್ ಫ್ರಂಟ್ ವಿರುದ್ಧ ಹಲವಾರು ಆರೋಪಗಳನ್ನು ಮಾಡಿದ್ದಾರೆ. ಈ ಎಲ್ಲಾ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ಪೊಲೀಸರು ನಕಲಿ ದಾಖಲೆಗಳನ್ನು ಅಳವಡಿಸಿ “ಭಯೋತ್ಪಾದನೆಯ ಸಂಚು” ಎಂಬ ಕಾಲ್ಪನಿಕ ಕಥೆಯನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ ಎಂದು ಪಿ.ಎಫ್.ಐ ರಾಷ್ಟ್ರೀಯ ಕಾರ್ಯದರ್ಶಿ ಮುಹಮ್ಮದ್ ಶಾಕೀಬ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ಬಂಧಿತರಿಂದ ಪತ್ತೆಯಾಗಿದೆ ಎನ್ನಲಾದ 8 ಪುಟಗಳ ದಾಖಲೆಯು ಸಂಪೂರ್ಣವಾಗಿ ಕಪೋಲಕಲ್ಪಿತವಾಗಿದೆ. ಪಾಪ್ಯುಲರ್ ಫ್ರಂಟ್ ಇದುವರೆಗೆ ಅಂತಹ ಯಾವುದೇ ಸಾಮಗ್ರಿಯನ್ನು ಪ್ರಕಟಿಸಿಲ್ಲ ಅಥವಾ ವಿತರಿಸಿಲ್ಲ. ಯುಪಿ ಪೊಲೀಸರು ಬಸ್ತಿಯಲ್ಲಿನ ಪ್ರಕರಣವೊಂದರ ಆರೋಪ ಪಟ್ಟಿಯಲ್ಲಿ ಇದನ್ನು ಸೇರಿಸಿದಾಗಲಷ್ಟೇ ಈ ದಾಖಲೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿತು. ಈ ದಾಖಲೆಯನ್ನು ಓದಿದ ಯಾರೇ ಆದರೂ, ನಿಶ್ಚಯವಾಗಿಯೂ ಇದೊಂದು ಕಟ್ಟುಕಥೆಯ ಹೊರತು ಬೇರೇನೂ ಅಲ್ಲ ಎಂಬ ತೀರ್ಮಾನಕ್ಕೆ ಬರಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಾಟ್ನಾ ಪೊಲೀಸರು ಈ ದಾಖಲೆಯನ್ನು ಪ್ರಸ್ತುತಪಡಿಸಿದ ರೀತಿಯು ಪಾಪ್ಯುಲರ್ ಫ್ರಂಟ್ ವಿರುದ್ಧ ಸುಳ್ಳು ಪ್ರಕರಣ ಸೃಷ್ಟಿಸುವ ಅಂತರಾಜ್ಯ ಪಿತೂರಿಯಾಗಿದೆ ಎಂಬುದರ ಕುರಿತು ಬೊಟ್ಟು ಮಾಡುತ್ತದೆ. ವಿವಿಧ ರಾಜ್ಯಗಳಲ್ಲಿ ಒಂದೇ ವಿಧಾನದಲ್ಲಿ ಪಾಪ್ಯುಲರ್ ಫ್ರಂಟ್ ಅನ್ನು ಗುರಿಪಡಿಸುವ ಸಾಮಾನ್ಯ ಪ್ರವೃತ್ತಿ ಕಂಡು ಬರುತ್ತಿದ್ದು, ಇದು ಒಂದೇ ಮೇಜಿನಿಂದ ಬರುವ ಸಂಘಟನೆಯ ವಿರುದ್ಧದ ಒಂದು ರಾಜಕೀಯ ನಿರ್ಧಾರದ ಭಾಗವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಅವರು ದೂರಿದ್ದಾರೆ.
ಪಾಪ್ಯುಲರ್ ಫ್ರಂಟ್ ಕಾನೂನಾತ್ಮಕ ಮತ್ತು ಪ್ರಜಾಸತ್ತಾತ್ಮಕವಾಗಿ ಕಾರ್ಯಾಚರಿಸುತ್ತಿರುವ ಒಂದು ಸಂಘಟನೆಯಾಗಿದ್ದು, ಇದು ಎಂದೂ ನೆಲದ ಕಾನೂನನ್ನು ಗೌರವಿಸುವ ಸಂಸ್ಕೃತಿಗೆ ಒತ್ತು ನೀಡುತ್ತದೆ. ಇದರ ಕಾರ್ಯಚಟುವಟಿಕೆಗಳು ಪಾರದರ್ಶಕವಾಗಿವೆ ಮತ್ತು ವೇಗವಾಗಿ ಜನಪ್ರಿಯತೆಯನ್ನು ಗಳಿಸುತ್ತಿದೆ. ಸಂಘಟನೆಯನ್ನು ಅರಿತ ಯಾವ ವ್ಯಕ್ತಿಗಳೂ ಈ ವಾಸ್ತವದ ಕುರಿತು ಸಂದೇಹ ವ್ಯಕ್ತಪಡಿಸಲಾರರು. ಯಾವುದೇ ರೀತಿಯ ಪ್ರಜಾಸತ್ತಾತ್ಮಕ ಭಿನ್ನಾಭಿಪ್ರಾಯಗಳ ವಿರುದ್ಧ ಸಮರ ಸಾರಿರುವ ದೇಶದ ಪೊಲೀಸರು ಮತ್ತು ಏಜೆನ್ಸಿಗಳಿಗೆ ಈ ರೀತಿಯ ಸುಳ್ಳು ಪ್ರಕರಣಗಳು ಅಸ್ತ್ರವಾಗಿ ಪರಿಣಮಿಸಿವೆ ಎಂದು ಕಿಡಿಕಾರಿದರು.
ಪಾಪ್ಯುಲರ್ ಫ್ರಂಟ್ ಅನ್ನು ರಾಕ್ಷಸೀಕರಿಸುವ ಮತ್ತು ಸುತ್ತಲೂ ನಿಗೂಢತೆಯನ್ನು ಸೃಷ್ಟಿಸುವ ಮೂಲಕ ಜನರ ಮನಸ್ಸಿನಲ್ಲಿ ಭೀತಿ ಉಂಟು ಮಾಡುವ ಈ ದುಷ್ಟ ಯೋಜನೆಗಳು ಸಾಂವಿಧಾನಿಕ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಇರುವ ಸಂಘಟನೆಯ ಪ್ರಜಾಸತ್ತಾತ್ಮಕ ಹೋರಾಟದ ಮೇಲೆ ಯಾವುದೇ ಪರಿಣಾಮ ಬೀರದು ಎಂಬ ವಿಚಾರವನ್ನು ಪಾಪ್ಯುಲರ್ ಫ್ರಂಟ್ ಸ್ಪಷ್ಟಪಡಿಸಲು ಬಯಸುತ್ತದೆ ಎಂದು ತಿಳಿಸಿದರು.