ಉಪ್ಪಿನಂಗಡಿ: ಆತೂರು ಸಮೀಪದ ಕುದ್ಲೂರು ಎಂಬಲ್ಲಿ ಹಿಂದು ಯುವತಿಯೋರ್ವಳು ತನ್ನ ಮುಸ್ಲಿಮ್ ಗೆಳತಿಯ ಮನೆಗೆ ಭೇಟಿ ನೀಡಿದ್ದು, ಈ ವೇಳೆ ಮನೆಗೆ ದಾಳಿ ನಡೆಸಿ ಕೋಲಾಹಲ ಸೃಷ್ಟಿಸಿದ ಸಂಘಪರಿವಾರದ ಕಾರ್ಯಕರ್ತರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಉಪ್ಪಿನಂಗಡಿ ತಾಲೂಕು ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಮೆಜೆಸ್ಟಿಕ್ ಆಗ್ರಹಿಸಿದ್ದಾರೆ.
ಇಬ್ಬರು ಯುವತಿಯರು ಗೆಳತಿಯರಾಗಿದ್ದು, ಪರಸ್ಪರರ ಅನ್ಯೋನ್ಯತೆಯಿಂದ ಇದ್ದರು. ಇದೇ ಕಾರಣದಿಂದ ಯುವತಿ ಮನೆಗೆ ಭೇಟಿ ನೀಡಿದ್ದಳು. ಆದರೆ ಇದನ್ನೇ ನೆಪ ಮಾಡಿಕೊಂಡು ಸಂಘಪರಿವಾರದ ಕಾರ್ಯಕರ್ತರು ಮುಸ್ಲಿಮ್ ಯುವತಿಯ ಮನೆಗೆ ದಾಳಿ ನಡೆಸಿ ಅಲ್ಲಿ ಗಲಾಟೆ ಎಬ್ಬಿಸಿ ಮನೆಯವರಿಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದಾರೆ. ಮಾತ್ರವಲ್ಲ ನಂತರ ಅಲ್ಲಿಗೆ ಪೊಲೀಸರನ್ನೂ ಕರೆಸಿ ಭೀತಿಯ ವಾತಾವರಣ ಸೃಷ್ಟಿಸಿದ್ದಾರೆ. ಕೋಮು ಸೌಹಾರ್ದತೆಯನ್ನು ಬಯಸದ ಕೋಮುವ್ಯಾಧಿಗಳಿಂದ ಮಾತ್ರ ಇಂತಹ ಸಮಾಜ ವಿರೋಧಿ ದುಷ್ಕೃತ್ಯಗಳನ್ನು ನಡೆಸಲು ಸಾಧ್ಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.