ಕುಚ್ಚಲು ಅಕ್ಕಿ ವಿತರಿಸುತ್ತೇವೆ ಎಂದು ಕಳೆದ ಎರಡು ವರ್ಷಗಳಿಂದ ಸಚಿವ ಕೋಟ ರೈಲು ಬಿಡುತ್ತಿದ್ದಾರೆ: SDPI ವ್ಯಂಗ್ಯ

Prasthutha|

ಮಂಗಳೂರು: ಕರಾವಳಿ ಜಿಲ್ಲೆಗಳಿಗೆ ಕುಚ್ಚಲು ಅಕ್ಕಿ ವಿತರಿಸುತ್ತೇವೆ ಎಂದು ಕಳೆದ ಎರಡು ವರ್ಷಗಳಿಂದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ರೈಲು ಬಿಡುತ್ತಿದ್ದಾರೆ ಎಂದು SDPI ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ವ್ಯಂಗ್ಯವಾಡಿದ್ದಾರೆ.

- Advertisement -

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ಅವರು, ಕಳೆದ ಎರಡು ವರ್ಷಗಳ ಹಿಂದೆ ಪ್ರಥಮ ಕೊರೋನಾ ಅಲೆಯ ಸಂದರ್ಭದಲ್ಲಿ ಅಂದಿನ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಹುತೇಕ ಮಂದಿ ಕುಚ್ಚಲು ಅಕ್ಕಿಯನ್ನು ಉಪಯೋಗಿಸುವ ಕಾರಣದಿಂದ ಪಡಿತರ ವಿತರಣೆಯಲ್ಲಿ ಬಿಳಿ ಅಕ್ಕಿಯ ಬದಲು ಕುಚ್ಚಲು ಅಕ್ಕಿಯನ್ನು ಕೂಡಲೇ ವಿತರಿಸಲು ಕ್ರಮ ಕೈಗೊಂಡಿದ್ದೇವೆ ಈ ಬಗ್ಗೆ ಟೆಂಡರ್ ಕರೆದಿದ್ದೇವೆ, ಮುಂದಿನ ತಿಂಗಳಿಂದ ಉಭಯ ಜಿಲ್ಲೆಗಳ ಪಡಿತರ ಅಂಗಡಿಯಲ್ಲಿ ಕುಚ್ಚಲು ಅಕ್ಕಿ ದೊರೆಯುತ್ತದೆ ಎಂದು ಅಧಿಕಾರಿಗಳ ಸಭೆ ನಡೆಸಿ ಮಾಧ್ಯಮದ ಮುಂದೆ ಘೋಷಣೆ ಮಾಡಿದ್ದಾರೆ.

ಆದರೆ ಎರಡು ವರ್ಷಗಳು ಕಳೆದರೂ ಇನ್ನೂ ಆ ಯೋಜನೆ ಜಾರಿಗೆ ತರಲು ವಿಫಲರಾದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವರಾದ ಶ್ರೀನಿವಾಸ ಪೂಜಾರಿ ಯವರು ಇಂದು ಬೆಂಗಳೂರಿನಲ್ಲಿ ಅಧಿಕಾರಿಗಳ ಸಭೆ ನಡೆಸಿ ಕರಾವಳಿ ಜಿಲ್ಲೆಗಳಲ್ಲಿ ಕುಚ್ಚಲು ಅಕ್ಕಿಯನ್ನು ವಿತರಿಸಲು ಚಿಂತನೆ ನಡೆಸಿದ್ದೇವೆ ಈ ಬಗ್ಗೆ ಕೇರಳ ಮತ್ತು ತೆಲಂಗಾಣಕ್ಕೆ ಸಮೀಕ್ಷೆ ನಡೆಸಲು ನಿಯೋಗ ಕಳಿಸಿದ್ದೇವೆ ಎಂದು ಸಚಿವರು ರೈಲು ಬಿಟ್ಟಿದ್ದಾರೆ ಎಂದು ಅವರು ಲೇವಡಿ ಮಾಡಿದ್ದಾರೆ.

- Advertisement -

ಎರಡು ವರ್ಷಗಳ ಹಿಂದೆ ಕೊರೋನಾದಿಂದ ಸಂಕಷಕ್ಕೆ ಸಿಲುಕಿ ಬಡ ಹಾಗೂ ಮಧ್ಯಮ ವರ್ಗದ ಜನರು ಆಹಾರಕ್ಕಾಗಿ ಪರಿತಪಿಸುತ್ತಿದ್ದ ಸಂದರ್ಭದಲ್ಲಿ ಜಿಲ್ಲೆಯ ಜನತೆಗೆ ಉಪಯೋಗವಿಲ್ಲದ ಬಿಳಿ ಆಕ್ಕಿಯನ್ನು ವಿತರಿಸುತ್ತಿದ್ದ ವಿಚಾರದ ಬಗ್ಗೆ ಬಹಳಷ್ಟು ಅಸಮಾದಾನವಿತ್ತು . ಅಂದು ಜಿಲ್ಲೆಗೆ ಕುಚ್ಚಲು ಅಕ್ಕಿ ವಿತರಿಸುತ್ತೇವೆ ಎಂದು ಸಚಿವರು ಹೇಳಿಕೆ ನೀಡಿದ್ದರಿಂದ ಪಡಿತರ ಅಕ್ಕಿಯನ್ನೇ ಅವಲಂಬಿತರಾದ ಬಡಜನರು ಬಹಳ ಸಂತೋಷ ಹೊಂದಿದ್ದರು . ಆದರೆ ಸಚಿವರು ತನ್ನ ಪುಕ್ಕಟೆ ಪ್ರಚಾರಕ್ಕಾಗಿ ಹಳಿಯಿಲ್ಲದ ರೈಲು ಬಿಟ್ಟಿದ್ದಾರೆ ಇದೀಗ ಆ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಜನಸಾಮಾನ್ಯರ ಕಿವಿಯ ಮೇಲೆ ಹೂ ಇಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಸರಕಾರ ಮತ್ತು ಅದರ ಸಚಿವರುಗಳು ಘೋಷಣೆ ಮಾಡಿದ ಯೋಜನೆಗಳನ್ನು ಜಾರಿಗೆ ತರಲು ನಿರಂತರವಾಗಿ ಹಲವಾರು ಬಾರಿ ವಿಫಲರಾದರು. ಪಠ್ಯ ಪುಸ್ತಕ ಕೇಸರೀಕರಣ, ಹಿಜಾಬ್ ನಿಷೇಧ, ಅಝಾನ್ ನಿರ್ಬಂಧ, ಗೋಹತ್ಯೆ ನಿಷೇಧ, ಮತಾಂತರ ನಿಷೇದದಂತಹ ಅನಗತ್ಯ ಹಾಗೂ ಭಾವನಾತ್ಮಕ ವಿಚಾರಗಳನ್ನು ಜಾರಿಗೆ ತರಲು ಪೈಪೋಟಿ ನಡೆಸುವ ಬಿಜೆಪಿ ಸರಕಾರ ಬಡಜನರಿಗೆ ಸಮರ್ಥವಾಗಿ ಆಹಾರ ಧಾನ್ಯಗಳು ಸೇರಿದಂತೆ ಇತರ ಯೋಜನೆಗಳನ್ನು ಜಾರಿಗೆ ತರಲು ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಈ ನಿಟ್ಟಿನಲ್ಲಿ ಸರಕಾರ ಕೂಡಲೇ ಎಚ್ಚೆತ್ತುಕೊಂಡು ಕರಾವಳಿ ಭಾಗದಲ್ಲಿ ಪಡಿತರವನ್ನು ಸಮರ್ಪಕವಾಗಿ ಮತ್ತು ಜನರಿಗೆ ಉಪಯೋಗಕ್ಕೆ ಅಗತ್ಯವಾದ ಕುಚ್ಚಲು ಅಕ್ಕಿಯನ್ನು ಪೂರೈಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅನ್ವರ್ ಸಾದತ್ ಬಜತ್ತೂರು ಆಗ್ರಹಿಸಿದ್ದಾರೆ.



Join Whatsapp