ಮಳೆ ಹಾನಿ; 24 ಗಂಟೆಗಳಲ್ಲಿ ಪರಿಹಾರ: ಉಸ್ತುವಾರಿ ಸಚಿವ ಗೋಪಾಲಯ್ಯ

Prasthutha|

ಹಾಸನ :  ಮುಖ್ಯ ಮಂತ್ರಿಗಳ ನಿರ್ದೇಶನದಂತೆ ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ 24 ಗಂಟೆಗಳಲ್ಲಿ ಪರಿಹಾರ ನೀಡಲಾಗುವುದು ಎಂದು ಅಬಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಗೋಪಾಲಯ್ಯ ತಿಳಿಸಿದ್ದಾರೆ.

- Advertisement -

ಹೊಳೆನರಸೀಪುರ ಪಟ್ಟಣದ  ಯಾಸಿನ್ ನಗರ ಬಡಾವಣೆಗಳಲ್ಲಿ ಮಳೆಯಿಂದ ಹಾನಿಗೀಡಾಗಿರುವ ಮನೆಗಳನು ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಳೆಯಿಂದ ಸಂಪೂರ್ಣ ಹಾನಿಯಾದ ಮನೆಗಳಿಗೆ ತಲಾ 5 ಲಕ್ಷ ಪರಿಹಾರ ಒದಗಿಸಲಾಗುವುದು ಎಂದು ಹೇಳಿದರು.

ಗ್ರಾಮೀಣ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಬಡವರ ಮತ್ತು ರೈತರ  ಮನೆಗಳಿಗೆ ಶೀಘ್ರ ಪರಿಹಾರ  ದೊರಕುವುದು.  40 ಎಕರೆ  ತಂಬಾಕು ಮತ್ತು 25 ಎಕರೆ ಶೇಂಗಾ ಬೆಳೆ ಹಾನಿಯಾಗಿದ್ದು, ತ್ವರಿತವಾಗಿ ಬೆಳೆ ಪರಿಹಾರಕ್ಕೆ ಅಧಿಕಾರಿಗಳಿಂದ ವರದಿ ತಯಾರಿಸಿ ಅನುದಾನವನ್ನು ಬಿಡುಗಡೆ ಮಾಡಲು ಹೆಚ್ಚಿನ ಕ್ರಮವಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

- Advertisement -

ಶೇಕಡಾ 25 ರಷ್ಟು ಮನೆ ಕುಸಿತವಾಗಿದ್ದರೆ 3 ಲಕ್ಷ ಹಣ ಹಾಗೂ ಉಳಿದ ಮನೆಗಳಿಗೆ ತಲಾ 50 ಸಾವಿರ ಪರಿಹಾರ ನೀಡಲಾಗುವುದು ಮತ್ತು ಈಗಾಗಲೇ ಸಂಪೂರ್ಣ ಮನೆ ಹಾನಿಗೆ 2 ಲಕ್ಷ ಹಣ ಒದಗಿಸಲು ಅನುಮತಿ ದೊರೆತಿದೆ ಅದನ್ನು ತಕ್ಷಣ ತಲುಪಿಸಲಾಗುವುದು. ರಸ್ತೆಗಳ ದುರಸ್ತಿಗೆ ಸಂಬಂಧ ಪಟ್ಟ ಸಚಿವರೊಂದಿಗೆ ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಶಾಸಕ ಹೆಚ್.ಡಿ ರೇವಣ್ಣ ಮಾತನಾಡಿ, ಕಳೆದ ಬಾರಿ ಅನೇಕ ಮನೆಗಳಿಗೆ ಸಂಪೂರ್ಣ ಪರಿಹಾರ ಹಣ ದೊರೆತಿಲ್ಲ. ಹಾಗಾಗಿ ಅಂತಹ ಮನೆಗಳಿಗೂ ಪರಿಹಾರ ತಲುಪಿಸಲು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದೇ ವೇಳೆ ಜಿಲ್ಲಾಧಿಕಾರಿ ಆರ್. ಗಿರೀಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಾಂತರಾಜು ಹಾಗೂ ಮತ್ತಿತರರು ಹಾಜರಿದ್ದರು.



Join Whatsapp