ಬೆಂಗಳೂರು: ಭವಿಷ್ಯ ಕೇಳುವ ನೆಪದಲ್ಲಿ ಮನೆಗೆ ನುಗ್ಗಿ ಜ್ಯೋತಿಷಿ ಪ್ರಮೋದ್ ಅವರ ಕೈಕಾಲು ಕಟ್ಟಿ ನಗದು ಚಿನ್ನಾಭರಣ ದೋಚಿದ್ದ ಆರೋಪಿಗಳನ್ನು ಕೆಂಗೇರಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಮಹಿಳೆಯೊಬ್ಬಳು ಭಾಗಿಯಾಗಿರುವುದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ. ಜ್ಯೋತಿಷಿ ಪ್ರಮೋದ್ ಮನೆ ದರೋಡೆಗೆ ಸುಪಾರಿ ನೀಡಿದ್ದ ಮಹಿಳೆ ಸೇರಿ ದರೋಡೆ ಮಾಡಿದ್ದ ಗ್ಯಾಂಗನ್ನು ಪೊಲೀಸರು ತಮಿಳುನಾಡಿನ ಸೇಲಂನಿಂದ ಬಂಧಿಸಿ ನಗರಕ್ಕೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಮೇಘನಾ ಎಂಬಾಕೆ ಜ್ಯೋತಿಷಿ ಪ್ರಮೋದ್ ಬಳಿ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದು ಅವರ ಬಳಿಯೇ ಸಾಲ ಕೇಳಿದ್ದಳು. ಸಾಲ ಕೊಡಲು ಜ್ಯೋತಿಷಿ ಪ್ರಮೋದ್ ನಿರಾಕರಿಸಿದ್ದರಿಂದ ದರೋಡೆಗೆ ಸಂಚು ರೂಪಿಸಿ ತಮಿಳುನಾಡಿನ ಮೂವರಿಗೆ ಸುಪಾರಿ ನೀಡಿದ್ದಳು. ಅದರಂತೆ ಕಳೆದ ಜುಲೈ 10 ರಂದು ಜ್ಯೋತಿಷಿ ಜೊತೆ ಮಹಿಳೆಯು ಕಚೇರಿಯಲ್ಲಿದ್ದು ಭವಿಷ್ಯ ಕೇಳಲು ಯಾರೂ ಬಂದಿರದ ಸಮಯ ನೋಡಿ ಸುಪಾರಿ ಗ್ಯಾಂಗ್ ಗೆ ತಿಳಿಸಿದ್ದಾಳೆ.
ಈ ವೇಳೆ ಅಲ್ಲಿಗೆ ಭವಿಷ್ಯ ಕೇಳುವ ನೆಪದಲ್ಲಿ ಬಂದ ಗ್ಯಾಂಗ್ ಜ್ಯೋತಿಷಿಗೆ ಅನುಮಾನ ಬಾರದಂತೆ ಮೊದಲಿಗೆ ಮಹಿಳೆಯ ಕೈಕಾಲು ಕಟ್ಟಿ ಬೆದರಿಸುವ ನಾಟಕ ಮಾಡಿದೆ. ಬಳಿಕ ಜ್ಯೋತಿಷಿ ಪ್ರಮೋದ್ ಗೆ ಹಲ್ಲೆ ಮಾಡಿ ಮನೆಯಲ್ಲಿದ್ದ 250 ಗ್ರಾಂ ಚಿನ್ನಾಭರಣ, 5 ಲಕ್ಷ ನಗದು ದೋಚಿದ್ದಾರೆ.
ಕೃತ್ಯದ ಸುದ್ದಿ ತಿಳಿದು ಸ್ಥಳಕ್ಕೆ ಪೊಲೀಸರು ಬಂದಾಗಲೂ ಏನೂ ಆಗದಂತೆ ಮೇಘನಾ ನಟಿಸಿ ಮಾಹಿತಿ ನೀಡಿದ್ದಳು. ಆದಾದ ಬಳಿಕ ಆಕೆ ಕೆಲಸಕ್ಕೆ ಬಾರದೇ ಕಳವು ಮಾಡಿದ ಗ್ಯಾಂಗ್ ಜೊತೆ ಹಣ ಚಿನ್ನ ಹಂಚಿಕೊಳ್ಳಲು ಸೇಲಂಗೆ ಹೋಗಿ ತಲೆಮರೆಸಿಕೊಂಡಿದ್ದಳು.
ಪ್ರಕರಣದ ಪತ್ತೆಗೆ ಡಿಸಿಪಿ ಲಕ್ಷ್ಮಣ ನಿಂಬರಗಿ ಅವರು ರಚಿಸಿದ್ದ ಇನ್ಸ್ಪೆಕ್ಟರ್ ವಸಂತ್ ನೇತೃತ್ವದ ಕೆಂಗೇರಿ ಪೊಲೀಸರ ವಿಶೇಷ ತಂಡವು ಸಿಸಿಕ್ಯಾಮರಾ ಇನ್ನಿತರ ಸುಳಿವು ಆಧರಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದೆ.