ಮುಲ್ಕಿ: ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಪಕ್ಷಿಕೆರೆ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯತ್ ನ ಪಂಜದ ಉಲ್ಯ ಭಾಗ ನೆರೆ ಹಾನಿಗೊಳಗಾಗಿತ್ತು. ಈ ಸ್ಥಳದ ವೀಕ್ಷಣೆಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬರಬೇಕಾಗಿದ್ದು ಕೊನೆಯ ಕ್ಷಣದಲ್ಲಿ ರದ್ದಾಗಿದೆ.
ಸಿ.ಎಂ ಆಗಮನದ ಹಿನ್ನಲೆಯಲ್ಲಿ ಲಕ್ಷಗಟ್ಟಲೆ ಖರ್ಚು ಮಾಡಿ ದಾರಿದೀಪ ಇಲ್ಲದೆ ಇದ್ದ ನೆರೆ ಆವೃತ ಪ್ರದೇಶಕ್ಕೆ ಲೈಟ್ ಅಳವಡಿಸಲಾಗಿದ್ದು, ಕೆಸರುಮಯವಾದ ರಸ್ತೆಗೆ ಜಲ್ಲಿ ಹುಡಿ ಹಾಕಲಾಗಿತ್ತು.
ಹಳೆಯಂಗಡಿಯಿಂದ ಉಲ್ಯದ ತನಕ ಅಲ್ಲಲ್ಲಿ ಪೊಲೀಸ್ ಹಾಗೂ ಭದ್ರತಾ ಸಿಂಬ್ಬಂದಿಯನ್ನು ಬೆಳಗ್ಗಿನಿಂದಲೇ ನಿಯೋಜಿಸಲಾಗಿತ್ತು. ಭಾರೀ ಮಳೆ ನಡುವೆಯೂ ಅಧಿಕಾರಿಗಳ ತಂಡ ಮಧ್ಯಾಹ್ನದಿಂದಲೇ ಸ್ಥಳದಲ್ಲಿ ಬೀಡುಬಿಟ್ಟಿದ್ದು, ಶಾಸಕ ಉಮಾನಾಥ ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ ಈ ಎಲ್ಲಾ ವ್ಯವಸ್ಥೆಗಳನ್ನು ವೀಕ್ಷಿಸಿ ಮಾರ್ಗದರ್ಶನ ನೀಡಿದ್ದರು.
ಆದರೆ ಕೊನೆ ಕ್ಷಣದಲ್ಲಿ ಕೈಕೊಟ್ಟ ಸಿಎಂ ಸ್ಥಳೀಯ ನೆರೆಪೀಡಿತರನ್ನು ನಿರಾಸೆಗೊಳಿಸಿದ್ದಾರೆ. ತಡೆಗೋಡೆ ಸಹಿತ ದಾರಿದೀಪದಂತಹ ಅನೇಕ ಬೇಡಿಕೆಗಳನ್ನು ಸಿಎಂ ಜೊತೆ ಹೇಳಿಕೊಳ್ಳಲು ಬಂದಿದ್ದ ಗ್ರಾಮಸ್ಥರು ಹಿಡಿ ಶಾಪ ಹಾಕಿಕೊಂಡು ಮನೆಗೆ ಮರಳಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಶಾಸಕ ಉಮಾನಾಥ ಕೋಟ್ಯಾನ್, ಸಮಯದ ಅಭಾವದಿಂದ ಮುಖ್ಯಮಂತ್ರಿಯವರಿಗೆ ಆಗಮಿಸಲು ಸಾಧ್ಯವಾಗಿಲ್ಲ. ಬೆಂಗಳೂರಿಗೆ ಮರಳುವ ವೇಳೆ ಅಧಿಕಾರಿಗಳ ಜೊತೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿ, ಪಂಜ, ಉಲ್ಯ, ಕಿಲೆಂಜೂರು ಮತ್ತಿತರ ನೆರೆ ಆವೃತ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ಬೇಡಿಕೆ ಸಲ್ಲಿಸಲಾಗುವುದು ಎಂದರು.