ಅಪ್ರಾಪ್ತ ಬಾಲಕನ ಹತ್ಯೆ; ಮಾಜಿ ರೌಡಿ ಶೀಟರ್ ಸೇರಿ 8 ಮಂದಿ ವಶಕ್ಕೆ

Prasthutha|

ಹಾಸನ: ನಗರದ ಬಿಎಂ ರಸ್ತೆಯಲ್ಲಿರುವ ಪಬ್‌ವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ ಹಿನ್ನೆಲೆಯಲ್ಲಿ ಗುಂಪೊಂದು ಅಪ್ರಾಪ್ತ ಬಾಲಕನನ್ನು ಕೊಲೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

- Advertisement -

ನಗರದ ಹೊರವಲಯದ ಬಿಟ್ಟಗೌಡನಹಳ್ಳಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿ ವಿನಯ್ ಅಲಿಯಾಸ್ ವಿನಿ(17) ಕೊಲೆಯಾಗಿರುವ ಬಾಲಕ.

ಈ ಬಗ್ಗೆ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಎಸ್ಪಿ ಹರಿರಾಂ ಶಂಕರ್, ಹಳೇ ರೌಡಿ ಶೀಟರ್ ರಾಕಿ ಮತ್ತು ಆತನ ಸಹಚರರಿಂದ ಈ ಕೃತ್ಯ ನಡೆದಿದ್ದು, ಈ ಬಗ್ಗೆ ಈಗಾಗಲೇ ಮಹಿಳೆ ಸೇರಿ 8 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.

- Advertisement -

ಕಳೆದ ಶನಿವಾರ ಸಂಜೆ ಪಬ್‌ ನಲ್ಲಿ ರಾಕಿ ಮತ್ತು ಆತನ ಪತ್ನಿ ಸ್ನೇಹಿತನ ಹುಟ್ಟು ಹಬ್ಬದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ವಿನಯ್ ಹಾಗೂ ಇತರರು ಪತ್ನಿ ಎದುರೇ ರಾಕಿಯನ್ನು ಅವಮಾನಿಸಿದರು ಎನ್ನಲಾಗಿದೆ. ಅದಾದ ಬಳಿಕ ಎಲ್ಲರೂ ಲಿಫ್ಟ್ ನಲ್ಲಿ ಇಳಿಯುವಾಗ ರಾಕಿಯ ಪತ್ನಿಗೆ ಕೈ ತಾಕಿದ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ವಿನಯ್ ರಾಕಿಗೆ ಅವಾಜ್ ಹಾಕಿದ ಎನ್ನಲಾಗಿದೆ.

ಪತ್ನಿ ಎದುರು ಅವಮಾನ ಮಾಡಿ, ಅವಾಜ್ ಹಾಕಿದ್ದರಿಂದ ಕೆರಳಿದ ರಾಕಿ  ಮತ್ತು ಗ್ಯಾಂಗ್, ನೆಟ್‌ವರ್ಕ್ ಮೂಲಕ ವಿನಯ್‌ನನ್ನು ಪತ್ತೆಹಚ್ಚಿ ನಂತರ ಕಾರಿನಲ್ಲಿ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿ ಕೊಲೆ ಮಾಡಿದ್ದಾರೆ. ನಂತರ ಕಾರಿನಲ್ಲೇ ಮೃತದೇಹವನ್ನು ಸಕಲೇಶಪುರ ತಾಲೂಕು ಗುಂಡ್ಯ ಬಳಿಯ ಅರಣ್ಯ ಪ್ರದೇಶಕ್ಕೆ ಎಸೆದು ಬಂದಿದ್ದಾರೆ ಎಂದು ಗೊತ್ತಾಗಿದೆ. ಕೊಲೆ ಆರೋಪಿಗಳು ನೀಡಿದ ಸುಳಿವಿನ ಮೇರೆಗೆ ಹಾಸನ ಡಿವೈಎಸ್ಪಿ ಉದಯ ಭಾಸ್ಕರ್ ನೇತೃತ್ವದ ತಂಡ ಮೃತದೇಹ ಹುಡುಕಲು ಸ್ಥಳಕ್ಕೆ ತೆರಳಿದ್ದು,  ಕೃತ್ಯಕ್ಕೆ ಬಳಸಿದ್ದ ಕಾರು, ಆಯುಧ ವಶಪಡಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದರು.

ವಶಕ್ಕೆ ಪಡೆದಿರುವ 8 ಮಂದಿಯಲ್ಲಿ ಮೂವರು ಮಾಜಿ ರೌಡಿಶೀಟರ್‌ಗಳು ಇದ್ದಾರೆ. ಕೆಲವರು ಈ ಹಿಂದೆ ನಡೆದಿದ್ದ ಕೊಲೆ ಪ್ರಕಣಗಳಲ್ಲಿ ಭಾಗಿಯಾಗಿದ್ದಾರೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಡಿವೈಎಸ್ಪಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇದೀಗ ಎಲ್ಲಾ ಆಯಾಮಗಳಿಂದಲೂ ತನಿಖೆ ಮಾಡಲಾಗುತ್ತಿದೆ ಎಂದು  ತಿಳಿಸಿದರು.

ಇದಲ್ಲದೇ ಕೃತ್ಯದ ಹಿಂದೆ ಆಯುಧ ಪೂರೈಕೆ ಮಾಡಿದ, ಹಣ ನೀಡಿದ ಅನೇಕರಿದ್ದಾರೆ ಎಂಬ ಮಾಹಿತಿ ಸಿಕ್ಕಿದ್ದು, ಅವರನ್ನೂ ಶೀಘ್ರ ಬಂಧಿಸಲಾಗುವುದು ಎಂದು ಹೇಳಿದರು.

ಘಟನೆ ನಡೆದ ನಂತರ ವಿನಯ್ ಮನೆಯವರು ನಗರ ಠಾಣೆಗೆ ಮಿಸ್ಸಿಂಗ್ ಕೇಸ್ ನೀಡಿದ್ದರು. ಇದೀಗ ಅದನ್ನು ಕೊಲೆ ಕೇಸ್ ಆಗಿ ಪರಿವರ್ತಿಸಿ ತನಿಖೆ ಕೈಗೊಳ್ಳಲಾಗಿದೆ. ಸಾಮಾಜಿಕ ಜಾಲತಾಣ ಸೇರಿದಂತೆ ವಿವಿಧೆಡೆ ಸುಳ್ಳು ಸುದ್ದಿ ಹರಿದಾಡುತ್ತಿವೆ. ಎಲ್ಲದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪಬ್‌ನಲ್ಲಿದ್ದ ಸಿಸಿಟಿವಿ, ಬಿಲ್ ಇತ್ಯಾದಿ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅಪ್ರಾಪ್ತರಿಗೆ ಮದ್ಯ ಪೂರೈಸಿರುವುದು ಕಂಡು ಬಂದರೆ ಕಾನೂನು ರೀತಿ ಕ್ರಮ ಜರುಗಿಸಲಾಗುವುದು. ಈ ಬಗ್ಗೆ ನಮ್ಮ ಅಧಿಕಾರಿಗಳಿಗೆ ಪರಿಶೀಲಿಸಲು ಸೂಚನೆ ನೀಡಿದ್ದೇನೆಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದರು.



Join Whatsapp