►ರೈತ ಹೋರಾಟಗಾರರನ್ನು ಬಂಧಿಸಿದ ಪೊಲೀಸರು
ಬೆಂಗಳೂರು; ಬೆಂಗಳೂರು ನಗರದ ಸಂಚಾರ ದಟ್ಟಣೆ ನಿವಾರಣೆಗಾಗಿ ಜಾರಿಗೊಳಿಸುತ್ತಿರುವ ರಿಫೆರಲ್ ರಿಂಗ್ ರಸ್ತೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಕೂಡಲೇ ಪರಿಹಾರ ನೀಡಿ, ಇಲ್ಲವಾದಲ್ಲಿ ಯೋಜನೆಯನ್ನೇ ರದ್ದುಗೊಳಿಸಿ ಎನ್.ಒ.ಸಿ ನೀಡಿ ಎಂದು ಫೆರಿಫೆರಲ್ ರಸ್ತೆ ಭೂಸ್ವಾಧೀನ ರೈತರ ಹೋರಾಟ ಸಮಿತಿ ಆಗ್ರಹಿಸಿದೆ.
ಬಿಡಿಎ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ ರೈತ ಹೋರಾಟಗಾರರು ಭೂಮಿ ವಶಪಡಿಸಿಕೊಳ್ಳಲು ಹೊರಡಿಸಿರುವ ಅಂತಿಮ ಅಧಿಸೂಚನೆಯನ್ವಯ ಪರಿಹಾರ ನೀಡಿ, ಇಲ್ಲವಾದಲ್ಲಿ ಅಧಿಸೂಚನೆಯಿಂದ ಭೂಮಿಯನ್ನು ಕೈಬಿಟ್ಟು ಎನ್.ಒ.ಸಿ ನೀಡಿ ಎಂದು ಆಗ್ರಹಿಸಿದರು. ಪ್ರತಿಭಟನಾ ನಿರತ ರೈತರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.
ಈ ಯೋಜನೆಯನ್ನು ಭೂ ಸ್ವಾಧೀನ ಕಾಯ್ದೆ 2013 ರಂತೆ ಅಡಿಯಲ್ಲಿ ಅನುಷ್ಠಾನಗೊಳಿಸಲು ತೀರ್ಪು ನೀಡಿದೆ. ಆದರೆ ಈ ತಿರ್ಪುನ್ನು ಪ್ರಶ್ನಿಸಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸರ್ವೋಚ್ಚ ನ್ಯಾಯಾಯದಲ್ಲಿ ಮೇಲ್ಮನವಿ ಸಲ್ಲಿಸಿದೆ. ರೈತರಿಗೆ ಮೋಸ ಮಾಡಲು ವ್ಯವಸ್ಥಿತ ಕುತಂತ್ರ ನಡೆಸುತ್ತಿದೆ. ದಲಿತ, ಕಾರ್ಮಿಕ, ಬಡ ರೈತರ ಕುಟುಂಬಗಳ ಹಿತಾಸಕ್ತಿ ಬಯಸದೇ ಬೇಜಾಬ್ದಾರಿತನದಿಂದ ಕೆಲವು ಸುಳ್ಳು ಮಾಹಿತಿಗಳನ್ನು ನ್ಯಾಯಾಲಯಕ್ಕೆ ನೀಡಿದೆ ಎಂದು ಹೇಳಿದರು.
ರೈತರು ಈ ಭೂಮಿಯಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸ ಹಾಗೂ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹಣದ ಅವಶ್ಯಕತೆಗೆ ಅನುಗುಣವಾಗಿ ಅಲ್ಪ ಪ್ರಮಾಣದ ಜಮೀನನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ . 18 ವರ್ಷಗಳಿಂದ ನೊಂದಿರುವ ಬಡ ರೈತರ ಕುಟುಂಬಗಳ ಪರಿಸ್ಥಿತಿ ಚಿಂತಾಜನಕವಾಗಿದ್ದು, ರೈತರ ಹಿತಾಸಕ್ತಿಯನ್ನು ಕಾಪಾಡುವುದು ಸರ್ಕಾರದ ಕರ್ತೃವ್ಯವಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ರೈಲ್ವೆ ಯೋಜನೆ , ಮೆಟ್ರೋ, ಕೆ.ಐ.ಎ.ಡಿ.ಬಿ , ಸೇರಿದಂತೆ ಅನೇಕ ಯೋಜನೆಗಳಿಗಾಗಿ ಭೂ ಸ್ವಾಧೀನ ಪಕ್ರಿಯೆಗಳಲ್ಲಿ ಕೇಂದ್ರ ಸರ್ಕಾರದ ಕಾಯ್ದೆಯಡಿ ಪ್ರಸ್ತುತ ಮಾರುಕಟ್ಟೆ ಮೌಲ್ಯಕ್ಕಿಂತ ಮೂರು ಪಟ್ಟು ಪರಿಹಾರ ನೀಡಿದ್ದಾರೆ. ಆದರೆ ರಾಜ್ಯ ಸರ್ಕಾರ ಕೇಂದ್ರದ ಕಾಯ್ದೆಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದರು.
2013ರ ಭೂ-ಸ್ವಾಧೀನ ಮತ್ತು ಪುನರ್ವಸತಿ ಕಾಯ್ದೆಯಡಿ ಜಮೀನು ನೀಡಲು ರೈತರು ಸಿದ್ಧರಿದ್ದು, ಕಾಲಮಿತಿಯೊಳಗೆ ಯೋಜನೆಯನ್ನು ಕಾರ್ಯಗತಗೊಳಿಸಲು ಯಾವುದೇ ಗಟ್ಟಿಯಾದ ಕ್ರಮಗಳನ್ನು ಸರ್ಕಾರಗಳು ಕೈಗೊಂಡಿಲ್ಲ. ಇಚ್ಚಾಶಕ್ತಿ ಇಲ್ಲದಿದ್ದರೆ ಭೂಮಿ ಸ್ವಾಧೀನಮಾಡಿಕೊಂಡು ರೈತರಿಗೆ ಯಾಕೆ ತೊಂದರೆ ನೀಡುತ್ತೀರಿ ಎಂದು ಪ್ರತಿಭಟನಕಾರರು ಪ್ರಶ್ನಿಸಿದರು.
ಫೆರಿಪೆರಲ್ ರಿಂಗ್ ರಸ್ತೆಗೆ ಭೂ ಸ್ವಾಧೀನ ಸೇರಿ ಒಟ್ಟಾರೆ ರಸ್ತೆ ನಿರ್ಮಿಸಲು ಕನಿಷ್ಠ 37,500 ಕೋಟಿ ರೂ ಅಗತ್ಯವಿದೆ. ಆದರೆ ಇದಕ್ಕಾಗಿ ಸರ್ಕಾರ ಸೂಕ್ತ ರೀತಿಯಲ್ಲಿ ಹಣಕಾಸಿನ ವ್ಯವಸ್ಥೆ ಮಾಡಿಕೊಂಡಿಲ್ಲ. ಯೋಜನೆಯ ರೂಪುರೇಷೆಗಳಿಗೆ ಅಂತಿಮ ಅನುಮೋದನೆ ಪಡೆದುಕೊಂಡಿಲ್ಲ. ಸರ್ಕಾರದ ಅನಿಶ್ಚಿತತೆಯಿಂದಾಗಿ ರೈತರು ಆತಂತ್ರಗೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.