ಡಾ.ಎಂ.ಸಿ.ಮೋದಿ ಆಸ್ಪತ್ರೆ ಉಳಿವಿಗಾಗಿ ಲಿಂಗಾಯಿತ ಮಠಾಧೀಶರಿಂದ ಹೋರಾಟ; ಮುರುಘೇಂದ್ರ ಶಿವಾಚಾರ್ಯ ಸ್ವಾಮಿ

Prasthutha|

ಬೆಂಗಳೂರು: ಲಕ್ಷಾಂತರ ಮಂದಿಗೆ ದೃಷ್ಟಿ ನೀಡಿ ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬೆಂಗಳೂರಿನ ಮೋದಿ ಆಸ್ಪತ್ರೆಯ ಉಳಿವಿಗಾಗಿ ರಾಜ್ಯದ ಅರವತ್ತಕ್ಕೂ ಅಧಿಕ ಲಿಂಗಾಯತ ಮಠಾಧೀಶರು ಒಗ್ಗೂಡಿ ಹೋರಾಟ ಮಾಡಲಿದ್ದಾರೆ ಎಂದು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಶಿರಕ್ಯಾಡದ ಗುರು ಗಂಗಾಧರೇಶ್ವರ ಸಂಸ್ಥಾನ ಹಿರೇಮಠದ ಮುರುಘೇಂದ್ರ ಶಿವಾಚಾರ್ಯ ಸ್ವಾಮಿ ಹಾಗೂ ಅಕ್ಕಿ ಆಲೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ತಿಳಿಸಿದರು.

- Advertisement -

ಬೆಂಗಳೂರಿನ ಡಾ.ಎಂ.ಸಿ. ಮೋದಿ ಆಸ್ಪತ್ರೆಗೆ ಭೇಟಿ ನೀಡಿ, ಟ್ರಸ್ಟಿ ಸುಭಾಷ್ ಮೋದಿ ನಿವಾಸದಲ್ಲಿ ನಡೆದ ಪೂಜಾ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಎಂ.ಸಿ.ಮೋದಿಯವರು ಲಕ್ಷಾಂತರ ಮಂದಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ನೀಡುವ ಮೂಲಕ ದೃಷ್ಟಿ ನೀಡಿದ ಮಹಾನ್ ವೈದ್ಯರಾಗಿ ಜನರ ಮನೆ ಮಾತಾಗಿದ್ದರು. ಅವರ ಬಳಿಕ ಉಚಿತವಾಗಿ ಜನರ ಸೇವೆ ನೀಡುವಲ್ಲಿ ಮೊದಲಿನಂತೆ ಆಸ್ಪತ್ರೆ ಕಾರ್ಯ ನಿರ್ವಹಿಸಬೇಕಿದೆ. ಈ ನಿಟ್ಟಿನಲ್ಲಿ ಅವರ ಕುಟುಂಬಸ್ಥರು ಅವರ ಸಹೋದರನ ಮಗನಾದ ಸುಭಾಷ್ ಮೋದಿಯವರು ನೇತೃತ್ವ ವಹಿಸಿ ಸಮಾಜ ಸೇವೆಗೆ ಮುಂದಾಗಲಿ. ಕೆಲವು ದುರಾಲೋಚನೆ ಹೊಂದಿರುವ ಕಾಣದ ಕೈಗಳು M C ಮೋದಿ ಹಾಸ್ಪಿಟಲ್ ನಿರ್ವಹಣೆಯಲ್ಲಿ ತೊಂದರೆ ಕೊಡುತ್ತಿದ್ದು. ಮ್ಯಾನೇಜಿಂಗ್ ಟ್ರಸ್ಟಿಯವರಾದ ಸುಭಾಷ ಮೋದಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಇದರ ನಿವಾರಣೆಗಾಗಿ ಇಡೀ ರಾಜ್ಯದ ಲಿಂಗಾಯತ ಮಠಾಧೀಶರು ಒಂದಾಗಿ ಹೋರಾಟ ನಡೆಸಲಿದ್ದೇವೆ, ಟ್ರಸ್ಟ್ ನ ಆಸ್ತಿ ಕಬಳಿಸಲು ನಡೆಯುತ್ತಿರುವ ಹುನ್ನಾರದ ಹಿಂದೆ ಇರುವ ಕಾಣದ ಕೈಗಳ ಹೆಸರುಗಳನ್ನು ಮುಂದೆ ಬಹಿರಂಗಪಡಿಸುತ್ತೇವೆ ಎಂದು ಹೇಳಿದರು.

ಈ ಹಿಂದೆ ರಾಜ್ಯದ ಲಿಂಗಾಯತ ಮಠಾಧೀಶರು ಮೋದಿ ಆಸ್ಪತ್ರೆಯ ವಿಚಾರದಲ್ಲಿ ಎದ್ದಿರುವ ಗೊಂದಲ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೆವು. ಗೊಂದಲ ನಿವಾರಣೆ ಬಗ್ಗೆ ಭರವಸೆ ನೀಡಿದ್ದರು. ಮತ್ತೆ ಭೇಟಿ ಮಾಡುವ ಸಮಯ ಬಂದರೆ ಎಲ್ಲ ಲಿಂಗಾಯತ ಮಠಾಧೀಶರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಸಮಸ್ಯೆ ನಿವಾರಣೆಗೆ ಪ್ರಯತ್ನ ನಡೆಸಲಿದ್ದೇವೆ ಎಂದರು.

- Advertisement -

ಈ ಸಂದರ್ಭದಲ್ಲಿ ಮ್ಯಾನೇಜಿಂಗ್ ಟ್ರಸ್ಟಿಯವರಾದ ಸುಭಾಷ್ ಮೋದಿ ಹಾಗೂ ಲಿಂಗಾಯಿತ ಸಮುದಾಯದ ಮುಖಂಡರು ಮತ್ತು ಎಂಸಿ ಮೋದಿ ಅವರ ಅಭಿಮಾನಿ ಬಳಗದ ಸದಸ್ಯರು ಹಾಜರಿದ್ದರು.



Join Whatsapp