ರೈಲಿನಲ್ಲಿ ಪ್ರಯಾಣಿಕರಿಂದ ಹಣ ಪಡೆಯುತ್ತಿದ್ದ ನಕಲಿ ಟಿಟಿಇ ಬಂಧನ

Prasthutha|

ಮೈಸೂರು: ಟಿಪ್ಪು ಎಕ್ಸ್ಪ್ರೆಸ್ ರೈಲಿನಲ್ಲಿ ರೈಲು ಟಿಕೆಟ್ ಪರೀಕ್ಷಕ (ಟಿಟಿಇ) ಎಂದು ಹೇಳಿಕೊಂಡು ಪ್ರಯಾಣಿಕರಿಂದ ಹಣ ಪಡೆಯುತ್ತಿದ್ದ ವ್ಯಕ್ತಿಯೋರ್ವನನ್ನು ಜಾಗೃತ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

- Advertisement -

ಕನಕಪುರದ ಮೂಲದ ವ್ಯಕ್ತಿ ಮಲ್ಲೇಶ್ ಟಿಟಿಇ ಹೆಸರಿನಲ್ಲಿ ಪ್ರಯಾಣಿಕರಿಂದ ದಿನವೊಂದಕ್ಕೆ 7,000 ರೂಪಾಯಿಗಳನ್ನು ಸಂಪಾದಿಸುತ್ತಿದ್ದನು ಎನ್ನಲಾಗಿದೆ.

ಟಿಪ್ಪು ಎಕ್ಸ್ ಪ್ರೆಸ್ ನಲ್ಲಿದ್ದ ಟಿಟಿಇ ಸಿಬ್ಬಂದಿ ನೀಡಿದ ಮಾಹಿತಿಯ ಆಧಾರದಲ್ಲಿ ಈ ವ್ಯಕ್ತಿಯನ್ನು ಬಂಧಿಸಲಾಗಿದೆ. ಈ ವ್ಯಕ್ತಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು, ಅರ್ಧ ಸಮವಸ್ತ್ರ ಧರಿಸಿ, ನಕಲಿ ರೈಲ್ವೆ ಟ್ಯಾಗ್ ಧರಿಸಿ ವಾಕಿಟಾಕಿ ಹಿಡಿದು ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದಾಗ ಈತನ ಬಗ್ಗೆ ಅನುಮಾನ ಮೂಡಿದೆ.  ಮಾಹಿತಿ ಪಡೆದ ಟಿಟಿಇ ಲಾಬಿ ಇನ್ ಚಾರ್ಜ್ ಭಾಸ್ಕರ್ ಆತನನ್ನು ಹಿಂಬಾಲಿಸಿ ವಶಕ್ಕೆ ಪಡೆದಿದ್ದಾರೆ.

- Advertisement -

ರೈಲ್ವೆ ಸಿಬ್ಬಂದಿಯ ಎದುರಿನಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿರುವ ಮಲ್ಲೇಶ್, ಗುತ್ತಿಗೆ ಆಧಾರದಡಿ ತಾನು ಬೆಡ್ ರೋಲ್ ಬಾಯ್ ಆಗಿ ಕೆಲ ಸಮಯ ಕಾರ್ಯನಿರ್ವಹಿಸುತ್ತಿದ್ದೆ. ಆಗ ಟಿಟಿಇ ಕಾರ್ಯನಿರ್ವಹಣೆ ಬಗ್ಗೆ ತಿಳಿದುಕೊಂಡಿದ್ದೆ. ದೂರದ ಊರುಗಳಿಂದ, ಪ್ರಮುಖವಾಗಿ ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು ಧರ್ಮಾವರಂ ಸೆಕ್ಷನ್ ಗಳಿಂದ ಬರುತ್ತಿದ್ದ ಜನರನ್ನು ಗುರಿಯಾಗಿರಿಸಿಕೊಂಡು ಅವರಿಂದ ಹಣ ಪಡೆಯುತ್ತಿದ್ದೆ ಎಂದು ತನ್ನ ಕೃತ್ಯವನ್ನುಒಪ್ಪಿಕೊಂಡಿದ್ದಾನೆ.

ಇತ್ತೀಚೆಗೆ  ಇದೇ ರೈಲಿನಲ್ಲಿ ಬೆಂಗಳೂರು -ಹುಬ್ಬಳ್ಳಿ ಸೆಕ್ಷನ್ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕುಟುಂಬವೊಂದಕ್ಕೆ ರೈಲಿನಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ 7,000 ರೂಪಾಯಿ ಪಡೆದು ವಂಚಕನೋರ್ವ  ಅಲ್ಲಿಂದ ಪರಾರಿಯಾಗಿದ್ದನು. ಮೋಸ ಹೋದ ಕುಟುಂಬಸ್ಥರು ಟಿಟಿಇ ತಮ್ಮಿಂದ ಹಣ ಪಡೆದು ವಂಚಿಸಿದ್ದಾರೆಂದು ಭಾವಿಸಿ ರೈಲ್ವೆ ಇಲಾಖೆಗೆ ದೂರು ನೀಡಿದ್ದರು ಈ ಆರೋಪ  ಮೇಲೆ ಇದೇ ರೈಲಿನಲ್ಲಿ ನಿಯೋಜಿಸಲಾಗಿದ್ದ ಟಿಟಿಇ ಸುನಿಲ್ ಅವರನ್ನು 14 ದಿನಗಳ ಕಾಲ ಅಮಾನತುಗೊಳಿಸಲಾಗಿತ್ತು.  ಆ ವಂಚನೆಯನ್ನು ಕೂಡ ಇದೀಗ ಬಂಧಿತ ನಕಲಿ   ಟಿಟಿಇ ಮಲ್ಲೇಶ್  ಮಾಡಿದ್ದು ಎಂದು ತಿಳಿದು ಬಂದಿದೆ.



Join Whatsapp