ಸರಿಸಾಟಿಯಿಲ್ಲದ ನಾಯಕ, ಹಿರಿಯ ಸಹೋದರ: ಧೋನಿಗೆ ಶುಭ ಕೋರಿದ ವಿರಾಟ್ ಕೊಹ್ಲಿ

Prasthutha|

ನವದೆಹಲಿ: ಭಾರತ ಕ್ರಿಕೆಟ್ ಕಂಡ ಸರ್ವಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ 41ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. 2020 ಆಗಸ್ಟ್ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಧೋನಿ ನಿವೃತ್ತರಾಗಿದ್ದರೂ, ಕ್ರಿಕೆಟ್ ವಲಯದಲ್ಲಿ ಧೋನಿ ʻಹವಾ; ಇನ್ನೂ ಮುಂದುವರಿದಿದೆ. ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರವಾಗಿ ಐಪಿಎಲ್ ನಲ್ಲಿ ಕಣಕ್ಕಿಳಿಯುವ ಕ್ಯಾಪ್ಟನ್ ಕೂಲ್ ಧೋನಿ ಮೈದಾನಕ್ಕಿಳಿಯುತ್ತಲೇ ಹರ್ಷೋದ್ಘಾರಗಳ ಮೂಲಕ ಮಿಂಚಿನ ಸಂಚಾರವಾಗುತ್ತದೆ.

- Advertisement -

ಟೀಮ್ ಇಂಡಿಯಾ ಮೂರು ಐಸಿಸಿ ಟ್ರೋಫಿಗಳನ್ನು ಗೆಲ್ಲಲು ಸಾರಥ್ಯ ವಹಿಸಿದ್ದ ಏಕೈಕ ನಾಯಕ ಎಂಎಸ್ ಧೋನಿಗೆ ಗುರುವಾರ 41ರ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರತದ ದಿಗ್ಗಜ ಆಟಗಾರನಿಗ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

ಸರಿಸಾಟಿಯಿಲ್ಲದ ನಾಯಕ : ವಿರಾಟ್ ಕೊಹ್ಲಿ

- Advertisement -

ಧೋನಿ ಶುಭಾಶಯ ಕೋರಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ʻ ಸರಿಸಾಟಿಯಿಲ್ಲದ ನಾಯಕ, ಭಾರತೀಯ ಕ್ರಿಕೆಟ್ ಗೆ ನೀವು ನೀಡಿದ ಕೊಡುಗೆಗಾಗಿ ಧನ್ಯವಾದಗಳು. ನೀವು ನನಗೆ ಹಿರಿಯ ಸಹೋದರನಿದ್ದಂತೆ. ಪ್ರೀತಿ ಮತ್ತು ಗೌರವಗಳು ನಿರಂತರʼ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಓಂ ಹೆಲಿಕಾಪ್ಟರಾಯ ನಮಃ

ಭಾರತದ ಮಾಜಿ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹ್ವಾಗ್, ವಿಶಿಷ್ಟ ಶೈಲಿಯಲ್ಲಿ ಧೋನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ʻಫುಲ್ ಸ್ಟಾಪ್ ಹಾಕುವವರೆಗೆ ವಾಕ್ಯ ಹೇಗೆ ಪೂರ್ಣಗೊಳ್ಳುವುದಿಲ್ಲವೋ, ಅದೇ ರೀತಿಯಲ್ಲಿ ಧೋನಿ ಕ್ರೀಸ್ ನಲ್ಲಿ ಇರುವವರೆಗೂ ಪಂದ್ಯ ಮುಗಿಯುವುದಿಲ್ಲ. ಎಲ್ಲಾ ತಂಡಗಳು ಧೋನಿಯಂತಹ ಆಟಗಾರನನ್ನು ಹೊಂದಲು ಸಾಧ್ಯವಿಲ್ಲ. ಅಮೂಲ್ಯ ವ್ಯಕ್ತಿ ಮತ್ತು ಆಟಗಾರನಾಗಿರುವ ಧೋನಿಗೆ ಹುಟ್ಟು ಹಬ್ಬದ ಶುಭಾಶಯಗಳು. ಓಮ್ ಹೆಲಿಕಾಪ್ಟರಾಯ ನಮಃʼ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್, ಬಿಸಿಸಿಐ, ಸುರೇಶ್ ರೈನಾ, ವೆಂಕಟೇಶ್ ಪ್ರಸಾದ್, ದಿನೇಶ್ ಕಾರ್ತಿಕ್, ಐಪಿಎಲ್ ಫ್ರಾಂಚೈಸಿಗಳು ಸೇರಿದಂತೆ ಪ್ರಮುಖರೆಲ್ಲರೂ ಧೋನಿಗೆ ಶುಭಾಶಯ ಕೋರಿದ್ದಾರೆ.



Join Whatsapp