ಸವಣೂರು: ಅಲ್ ಹಿದಾಯ ಸೇವಾ ಕೇಂದ್ರ ಸವಣೂರು ವತಿಯಿಂದ ಗಣರಾಜ್ಯ ರಕ್ಷಿಸಿ ಅಭಿಯಾನದ ಪ್ರಯುಕ್ತ ಮಹಿಳೆಯರಿಂದ ಮಹಿಳೆಯರಿಗಾಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸವಣೂರು ಅಂಬೇಡ್ಕರ್ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸವಣೂರು ಗ್ರಾಮ ಪಂಚಾಯತ್ ಸದಸ್ಯೆ ಶಬೀನಾ ವಹಿಸಿದ್ದರು. ಡಾ. ಶನಾ ಪರ್ವೀನ್ ಬಿ. ಎಂ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ನ್ಯಾಷನಲ್ ವಿಮೆನ್ಸ್ ಫ್ರಂಟ್ ಜಿಲ್ಲಾ ಸಮಿತಿ ಸದಸ್ಯೆ ಆಯಿಶಾ ಖಲೀಲ್ ಮಾತನಾಡಿ, ಪ್ರಸಕ್ತ ಭಾರತದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ದೌರ್ಜನ್ಯಗಳಾಗುತ್ತಿದೆ. ಮಹಿಳೆಯರ ವೈಯಕ್ತಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ಕಸಿಯಲಾಗುತ್ತಿದೆ. ಸ್ತ್ರೀ ಶೋಷಣೆ ಹೆಚ್ಚಾಗುತ್ತಿದ್ದರೂ ಫ್ಯಾಸಿಸ್ಟ್ ಸರ್ಕಾರ ಅಪರಾಧಿಗಳನ್ನು ರಕ್ಷಿಸುವ ಕಾರ್ಯಗಳಲ್ಲಿ ನಿರತರಾಗಿರುವಾಗ ಸಾಂವಿಧಾನಿಕ ಹಕ್ಕುಗಳಿಗಾಗಿ ಧ್ವನಿ ಎತ್ತುವುದು ಮಹಿಳೆಯರ ಕರ್ತವ್ಯವಾಗಿದೆ ಎಂದರು.
ವೇದಿಕೆಯಲ್ಲಿ ಸವಣೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಝೊಹರಾ, ವಿಮೆನ್ ಇಂಡಿಯಾ ಮೂವ್ಮೆಂಟ್ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಝಾಹಿದ ಸಾಗರ್, ಬಾಲ ವಿಕಾಸ ಸಮಿತಿ ಮೊಗರು ಅಂಗನವಾಡಿಯ ಅಧ್ಯಕ್ಷೆ ರುಬೀನಾ ಸಾದಿಕ್, ಬಾಲ ವಿಕಾಸ ಸಮಿತಿ ಶಾಂತಿನಗರ ಅಂಗನವಾಡಿಯ ಅಧ್ಯಕ್ಷೆ ಅಸ್ಮಾನ್ ಲತೀಫ್, ಸವಣೂರು ಮೊಗರು ಎಸ್.ಡಿ.ಎಂ.ಸಿಯ ಸದಸ್ಯೆ ಅಲೀಮಾ ಬಿ.ಕೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿಮನ್ ಇಂಡಿಯಾ ಮೂವ್ ಮೆಂಟ್ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಅಂಸಿಫಾ ಬೆಳ್ಳಾರೆ ಸ್ವಾಗತಿಸಿ ವಂದಿಸಿದರು.