ಕೊಚ್ಚಿ: ಕೇರಳದ ಮೀನುಗಾರಿಕೆ ಮತ್ತು ಸಂಸ್ಕೃತಿ ವ್ಯವಹಾರ ಸಚಿವ ಸಾಜಿ ಚೆರಿಯನ್ ಅವರು ಭಾರತೀಯ ಸಂವಿಧಾನವನ್ನು ಟೀಕಿಸುವ ಮೂಲಕ ವಿವಾದವನ್ನು ಹುಟ್ಟು ಹಾಕಿದ್ದಾರೆ.
ಮಂಗಳವಾರ ಪ್ರಸಾರವಾದ ಒಂದು ವೀಡಿಯೋದಲ್ಲಿ ಅವರು, ದೇಶದ ಜನರನ್ನು ಲೂಟಿ ಮಾಡಲು ಅನುಕೂಲವಾಗುವಂತೆ ಸಂವಿಧಾನ ರಚನೆಯಾಗಿದೆ ಎಂದು ಹೇಳಿದ್ದಾರೆ.
ಪಟ್ಟಣಂತಿಟ್ಟದ ಮಲ್ಲಪ್ಪಳ್ಳಿಯಲ್ಲಿ ಇತ್ತೀಚೆಗೆ ಅವರು ಸಭೆಯಲ್ಲಿ ಮಾತನಾಡಿದ ವೀಡಿಯೋ ಅದು.
“ಮಾನವನ ಹುಟ್ಟಿನೊಂದಿಗೇ ಶೋಷಣೆಯೂ ಈ ಜಗತ್ತಿನಲ್ಲಿ ಆರಂಭವಾಗಿದೆ. ಈಗಿನ ಪರಿಸ್ಥಿತಿ ಹೇಗಿದೆಯೆಂದರೆ ಸಿರಿವಂತರು ಲೋಕವನ್ನು ಗೆಲ್ಲುತ್ತಿದ್ದಾರೆ. ಇದು ಏಕೆ ಸಹಜವಾಗಿದೆಯೆಂದರೆ ಸರಕಾರಿ ಯಂತ್ರಗಳು ಈ ಪ್ರಕ್ರಿಯೆಗೆ ಪೂರಕವಾಗಿದೆ. ನಾವು ಸುಂದರವಾಗಿ ಬರೆದ ಸಂವಿಧಾನವನ್ನು ಹೊಂದಿದ್ದೇವೆ ಎಂದು ನಾವೆಲ್ಲಾ ಹೇಳುತ್ತೇವೆ. ಆದರೆ ನಾನು ಹೇಳುತ್ತೇನೆ, ಅತಿ ಹೆಚ್ಚು ಜನರನ್ನು ಲೂಟಿ ಮಾಡಲು ಸಾಧ್ಯವಾಗುವ ರೀತಿಯಲ್ಲಿ ನಮ್ಮ ಸಂವಿಧಾನ ರಚಿಸಲಾಗಿದೆ.” ಎಂದು ಹೇಳಿದ್ದರು.
ಮಂಗಳವಾರ ಟೀವಿ ಚಾನೆಲ್ ಗಳಲ್ಲಿ ಇದು ಪ್ರಸಾರವಾದ ಮೇಲೆ ವಿಷಯ ವಿವಾದಕ್ಕೀಡಾಗಿದೆ.
“ಬ್ರಿಟಿಷರು ಏನನ್ನು ತಯಾರಿಸಿದ್ದರೋ ಭಾರತೀಯರು ಅದನ್ನು ಬರೆದಿಟ್ಟುಕೊಂಡರು. ಇದು ಜಾರಿಗೆ ಬಂದು 75ರ ಹತ್ತಿರ ವರ್ಷಾಗಳಾಗುವಾಗ ನಾನು ಹೇಳುತ್ತೇನೆ, ದೇಶದ ಜನರನ್ನು ಲೂಟಿ ಮಾಡಲು ಇದೊಂದು ಸುಂದರ ಸಂವಿಧಾನವಾಗಿದೆ. ಜಾತ್ಯತೀತತೆ, ಪ್ರಜಾಪ್ರಭುತ್ವದಂತಹ ಉತ್ತಮ ಅಂಶಗಳೂ ನಮ್ಮ ಸಂವಿಧಾನದಲ್ಲಿವೆ, ಆದರೆ ಅವುಗಳ ಗುರಿಯೂ ಜನಸಾಮಾನ್ಯರನ್ನು ಶೋಷಣೆ ಮಾಡುವುದಾಗಿದೆ.” ಎಂದು ಅವರು ಹೇಳಿದ್ದರು.
ಇದನ್ನು ವಿವರಿಸಿದ ಅವರು, ಭಾರತವು ಎಂಥ ದೇಶವೆಂದರೆ ಇದು ಕಾರ್ಮಿಕರ ಹೋರಾಟಗಳನ್ನು ಮಾನ್ಯ ಮಾಡುವುದಿಲ್ಲ. ಅದಕ್ಕೆ ಕಾರಣವಾಗಿರುವುದು ಸಂವಿಧಾನ. ಅದು ಕಾರ್ಮಿಕರ ಶೋಷಣೆಯನ್ನು ಪೋಷಿಸುತ್ತದೆ. ಅದಾನಿ ಮತ್ತು ಅಂಬಾನಿಗಳಂಥವರು ನಮ್ಮ ದೇಶದಲ್ಲಿ ಯಾವ ರೀತಿಯಲ್ಲಿ ಸಂವಿಧಾನವು ಅವರಿಗೆ ಅಷ್ಟು ಭದ್ರವಾದ ರಕ್ಷಣೆ ಒದಗಿಸಿದೆ. ನಾವು ಎಷ್ಟು ಜನ ಅವರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸಿಪಿಎಂ ನಾಯಕ ಚೆರಿಯನ್ ಪ್ರಶ್ನಿಸಿದರು.
ಭಾರತದಲ್ಲಿ ಕಾರ್ಮಿಕರ ಹಕ್ಕುಗಳ ರಕ್ಷಣೆ ಆಗುತ್ತಿಲ್ಲ ಎಂದು ಚೆರಿಯನ್ ಒತ್ತಿ ಹೇಳಿದರು.
“1957ರಲ್ಲಿ ಭಾರತದಲ್ಲಿ ಮೊದಲ ಕಮ್ಯೂನಿಸ್ಟ್ ಸರಕಾರ ಬಂದಾಗ ಅದರ ಮೊದಲ ಆದ್ಯತೆಯ ಕೆಲಸ ಕಾರ್ಮಿಕರ ಕಾಯ್ದೆಗಳು. ಆದರೆ ಸಂವಿಧಾನವು ಶೋಷಣೆಯನ್ನು ಮಾನ್ಯ ಮಾಡಿದೆ. ಕಡಿಮೆ ಸಂಬಳಕ್ಕೆ ದುಡಿಯಬೇಕಾಗಿರುವ ಕಾರ್ಮಿಕರಿಂದಾಗಿ ದೇಶದಲ್ಲಿ ಮಿಲಿಯಾಧೀಶರು ಬಲಶಾಲಿಗಳಾಗಿ ಮೂಡಿ ಬಂದಿದ್ದಾರೆ. ಕಾರ್ಮಿಕರಿಗೆ ಸರಿಯಾದ ಸಂಬಳ ಸವಲತ್ತು ನಿರಾಕರಿಸಲಾಗಿದೆ; ಶೋಷಿಸಲಾಗುತ್ತಿದೆ. ದುಡಿಮೆಯ ಲಾಭ ಜನರಿಗೆ ಸಿಗದೆ ಲಾಭಕೋರ ಬಲ್ಲಿದರಿಗೆ ಸೇರುತ್ತಿದೆ. ಎಂಟು ಗಂಟೆ ದುಡಿಮೆಯ ಬದಲು ಕಾರ್ಮಿಕರನ್ನು 18ರಿಂದ 20 ಗಂಟೆಯವರೆಗೆ ಕೂಡ ದುಡಿಸಲಾಗುತ್ತದೆ. ಸಂವಿಧಾನವು ಕಾರ್ಮಿಕರ ರಕ್ಷಣೆಗೆ ಏನಾದರೂ ಗ್ಯಾರಂಟಿ ನೀಡಿದೆಯೇ?” ಅವರು ಪ್ರಶ್ನಿಸಿದರು.
ಹೋರಾಟ ಮಾಡುವ ಕಾರ್ಮಿಕ ಸಂಘಗಳಿಗೆ ಇಂದು ಜನರ ಬೆಂಬಲ ಸಿಗುತ್ತದೆ ಎನ್ನುವ ನಂಬಿಕೆ ನನಗಿಲ್ಲ. ದೇಶದ ಎಲ್ಲ ಸಮಸ್ಯೆಗಳಿಗೆ ಕಾರ್ಮಿಕ ಸಂಘಟನೆಗಳವರೇ ಕಾರಣ ಎಂದು ಎಲ್ಲ ಕಡೆ ದೂರಲಾಗುತ್ತಿದೆ ಎಂದೂ ಅವರು ಹೇಳಿದರು.