ಮಲೆನಾಡಲ್ಲಿ ಮಳೆ ಅಬ್ಬರ; ಜನಜೀವನ ಅಸ್ತವ್ಯಸ್ತ

Prasthutha|

ಹಾಸನ: ಮಂಗಳೂರು, ಕೊಡಗು, ಚಿಕ್ಕಮಗಳೂರು ಮೊದಲಾದ ಕಡೆಗಳಲ್ಲಿ ಅಬ್ಬರಿಸುತ್ತಿರುವ ಮಳೆ  ಮಲೆನಾಡು ಭಾಗದಲ್ಲೂ ಜೋರಾಗಿದ್ದು, ಆಲೂರು, ಸಕಲೇಶಪುರ, ಬೇಲೂರು ಮೊದಲಾದ ಕಡೆಗಳಲ್ಲಿ ನಿನ್ನೆಯಿಂದಲೂ ಎಡೆಬಿಡದೆ ವರ್ಷಧಾರೆ ಮರ್ಮರಿಸುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.

- Advertisement -

ಹಾಸನ ಹಾಗೂ ಇತರೆಡೆಗಳಲ್ಲಿ ಮೋಡ ಕವಿದ ವಾತಾವರಣ ಇದ್ದು, ಜಿನುಗು ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದ್ದು, ಶಾಲಾ ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ಚಿಕ್ಕಮಗಳೂರು, ಮೂಡಿಗೆರೆ ಪ್ರದೇಶದಲ್ಲಿ ಜೋರು ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜೀವನದಿ ಹೇಮಾವತಿಗೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ.

- Advertisement -

ಹೇಮಾವತಿ ಜಲಾಶಯಕ್ಕೆ  ಇಂದು 9464 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೇಮಾವತಿ ಜಲಾಶಯದ ಗರಿಷ್ಠ ನೀರಿನ ಮಟ್ಟ 2922 ಅಡಿಗಳಾಗಿದ್ದು, ಇಂದು ನೀರಿನ ಮಟ್ಟ 2910.54 ಅಡಿಗೆ ಏರಿದೆ. ಜಲಾಶಯದ ಒಟ್ಟು ನೀರು ಸಂಗ್ರಹ ಪ್ರಮಾಣ 37.103 ಟಿಎಂಸಿ ಆಗಿದ್ದು, ಇಂದು 27.090 ಟಿಎಂಸಿ ನೀರಿದೆ.

ಮಲೆನಾಡು ಭಾಗದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವೆಡೆ ಜೋರು ಮಳೆಯಾಗಿದ್ದು,ಮತ್ತೆ ಕೆಲವೆಡೆ ವರುಣ ಕಣ್ಣಾ ಮುಚ್ಚಾಲೆ ಆಡುತ್ತಿರುವುದರಿಂದ ಜನ ಸಂಚಾರ ಮತ್ತು ವ್ಯಾಪಾರ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.

ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿಘಾಟ್ ರಸ್ತೆಯ ಎರಡೂ ಕಡೆಗಳಲ್ಲಿ ಜಲಪಾತಗಳಿಗೆ ಕಳೆ ಬಂದಿದೆ. ಕಾನನದ ಮಧ್ಯೆಯಿಂದ ಸೀಳಿದಂತೆ ನೀರು ಇಳಿಜಾರಿನತ್ತ ಹರಿಯುತ್ತಿರುವ ದೃಶ್ಯ ರಮಣೀಯವಾಗಿದೆ.



Join Whatsapp