ನೈತಿಕ ಹೊಣೆ ಹೊತ್ತು ಸಿಎಂ, ಗೃಹ ಸಚಿವ ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ರಾಜ್ಯಪಾಲರೇ ಸರ್ಕಾರವನ್ನು ವಜಾಗೊಳಿಸಬೇಕು: ಕಾಂಗ್ರೆಸ್ ಒತ್ತಾಯ

Prasthutha|

ಬೆಂಗಳೂರು: ಪಿಎಸ್ಐ ಅಕ್ರಮ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಅವರ ಬಂಧನವಾಗಿದ್ದು, ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಪಾಲರೇ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಜ್ಯದ ಮಾನ ಉಳಿಸಬೇಕು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.

- Advertisement -

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ,‘ಈಗ ನಡೆದಿರುವ ಬೆಳವಣಿಗೆ ಕರ್ನಾಟಕಕ್ಕೆ ಕಪ್ಪು ಚುಕ್ಕೆಯಾಗಿದೆ. ಚುಕ್ಕೆ ಚಿಕ್ಕದಾಗಿ ಕಾಣುತ್ತಿರಬಹುದು. ಆದರೆ ಇದರಿಂದ ರಾಜ್ಯದ ಆಡಳಿತ ಹಾಗೂ ಘನತೆಗೆ ಮಸಿ ಬಳಿದಂತಾಗಿದೆ. ಈ ಸಮಯದಲ್ಲಿ ಜನಸಾಮಾನ್ಯರ ರಕ್ಷಣೆಗೆ ಬಂದಿರುವ ನ್ಯಾಯಾಂಗಕ್ಕೆ ಸಾಷ್ಟಾಂಗ ನಮಸ್ಕರಿಸುವೆ. ಆದರೆ ರಾಜ್ಯದಲ್ಲಿ ನ್ಯಾಯಾಂಗಕ್ಕೂ ರಕ್ಷಣೆ ಇಲ್ಲದಂತಾಗಿದೆ. ನ್ಯಾಯಮೂರ್ತಿಗಳು ತಮ್ಮ ಸ್ಥಾನಕ್ಕೆ ಕಂಟಕ ಬಂದಿರುವ ರೀತಿ ದುಗುಡ ಹೇಳಿಕೊಂಡಿದ್ದಾರೆ. ಪ್ರತಿ ಸಂದರ್ಭದಲ್ಲಿ ನ್ಯಾಯಾಲಯ ಏನು ಹೇಳಿದೆ, ಸರ್ಕಾರ ಏನು ಬಯಸಿದೆ, ಈ ವಹಗರಣದಲ್ಲಿ ಮಾಹಿತಿ ನೀಡದೇ ಮುಚ್ಚಿಹಾಕಲು ಹೇಗೆ ಪ್ರಯತ್ನಿಸಿದೆ ಎಂಬುದು ದಾಖಲೆಗಳಿಂದ ಜಗಜ್ಜಾಹೀರಾಗಿದೆ ಎಂದು ಹೇಳಿದರು.

545 ಪಿಎಸ್ಐ ಹುದ್ದೆಗಳಿಗೆ 1.20 ಲಕ್ಷ ಯುವಕರು ಅರ್ಜಿ ಹಾಕಿ, ಅದರಲ್ಲಿ 52 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ. ಸುಮಾರು 300 ಹುದ್ದೆಗಳ ನೇಮಕ ಅಕ್ರಮವಾಗಿ ಆಗಿದೆ. ಪಿಎಸ್ ಐ ನೇಮಕ ಅಕ್ರಮದಲ್ಲಿ ಅಂಗಡಿ ಓಪನ್ ಆಗಿತ್ತು. ಉಪ್ಪಿನಂಗಡಿ ಓಪನ್ ಇದ್ದ ಕಾರಣಕ್ಕೆ, ಅದನ್ನು ಕೊಳ್ಳಲು ಯುವಕರು ಹೋಗಿದ್ದರು. ಅಂಗಡಿ ತೆಗೆಯದಿದ್ದರೆ ಯುವಕರು ಹೋಗುತ್ತಿದ್ದರೇ? ಈ ಉಪ್ಪಿನಂಗಡಿ ಯಾರದ್ದು? ಎಂಬ ತನಿಖೆ ಆಗಬೇಕು. ಆದರೆ ಸರ್ಕಾರ ಈ ಅಕ್ರಮದಲ್ಲಿ ಶಾಮೀಲಾಗಿ ಕೇವಲ ಖರೀದಿ ಮಾಡಿದವರನ್ನು ಮಾತ್ರ ಬಂಧಿಸಿ, ದೊಡ್ಡವರನ್ನು ಬಿಟ್ಟಿದೆ ಎಂದು ಕಿಡಿಕಾರಿದರು.

- Advertisement -

ಈಗ ಎಡಿಜಿಪಿ ವಿಚಾರಣೆ ಮಾಡಿದ್ದು, ಐಪಿಎಸ್ ಅಧಿಕಾರಿಯನ್ನು ಬಂಧಿಸಿದ್ದಾರೆ. ಬಂಧಿಸಿದ ಅರ್ಧಗಂಟೆಯಲ್ಲಿ ಆರೋಗ್ಯ ಪರೀಕ್ಷೆಗೆ ಕಳಿಸುತ್ತೀರಲ್ಲ, ನಿಮಗೆ ನಾಚಿಕೆ ಆಗುವುದೇ ಇಲ್ಲವೇ? ಯಾವುದೇ ವಿಚಾರಣೆ ಮಾಡಬೇಕಾದರೆ, ಅವರ ಹೇಳಿಕೆ, ಅವರ ಕೆಳ ಅಧಿಕಾರಿಗಳ ಹೇಳಿಕೆ, ಸರಿಯಾಗಿದೆಯೇ ಇಲ್ಲವೇ? ಎಂದು ಸುದೀರ್ಘ ಚರ್ಚೆ ನಡೆಸಿ ದಾಖಲಾತಿ ಸಂಗ್ರಹಿಸಿದ ನಂತರ ಅವರನ್ನು ವೈದ್ಯರ ಪರೀಕ್ಷೆಗೆ ಕಳುಹಿಸುವುದು ವಾಡಿಕೆ. ಕೋರ್ಟ್ ಹೇಳಿತೆಂದು ಅರ್ಧಗಂಟೆಯಲ್ಲಿ ಬಂಧಿಸಲಾಗಿದೆ. ಎಡಿಜಿಪಿ ಅವರ ಬಂಧನ ಕೇವಲ ನ್ಯಾಯಾಂಗ ಹಾಗೂ ಜನರ ಕಣ್ಣೊರೆಸುವ ತಂತ್ರವಾಗಿದೆ. ಬೇರೊಂದು ಪ್ರಕರಣದಲ್ಲಿ ಅಲೋಕ್ ಕುಮಾರ್ ಅವರನ್ನು ದಿನವಿಡೀ ವಿಚಾರಣೆ ಮಾಡಿದ್ದಿರಿ. ರಾಹುಲ್ ಗಾಂಧಿ ಅವರಿಗೆ 50 ತಾಸುಗಳ ವಿಚಾರಣೆ ಮಾಡಿದ್ದೀರಿ. ಆದರೆ ಈ ಪ್ರಕರಣದಲ್ಲಿ ಕೇವಲ ಅರ್ಧ ಗಂಟೆಯಲ್ಲಿ ವಿಚಾರಣೆ ಮುಗಿಸಿದ್ದೀರಿ ಎಂದು ಡಿಕೆಶಿ ಹರಿಹಾಯ್ದರು.

ಈ ಪ್ರಕರಣದಲ್ಲಿ ಸುಮಾರು 300 ರಿಂದ 500 ಕೋಟಿಯಷ್ಟು ಅವ್ಯವಹಾರ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ. ಇದೆಲ್ಲದರ ಸಂಪೂರ್ಣ ವಿಚಾರಣೆ ಮಾಡದೇ ಅವರನ್ನು ಬಂಧಿಸಿ ವಿಚಾರಣೆ ಮುಕ್ತಾಯಗೊಳಿಸಲು ಮುಂದಾಗಿದ್ದಾರೆ.

ನಿನ್ನೆ ಡಿಸಿ ಹಾಗೂ ಎಡಿಜಿಪಿ ಬಂಧಿಸಲಾಗಿದೆ. ನಾವು ಈ ಹಿಂದೆಯೇ ಹಗರಣದಲ್ಲಿ ಇವರ ಕೈವಾಡವಿದೆ, ಕ್ರಮ ಕೈಗೊಳ್ಳುವಂತೆ ಹೇಳಿದ್ದೆವು. ಈ ಎಲ್ಲ ಅಕ್ರಮಗಳಿಗೂ ಸರ್ಕಾರವೇ ನೇರಹೊಣೆ. ಹೀಗಾಗಿ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕು. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಂಗ ತನಿಖೆ ನಡೆಸಬೇಕು. ಈ ಬಗ್ಗೆ ವಿರೋಧ ಪಕ್ಷದ ನಾಯಕರು ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ. ಇನ್ನು ಸದನದಲ್ಲಿ ಈ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸದನದಲ್ಲಿ ಆರು ಬಾರಿ ಸುಳ್ಳು ಹೇಳಿ, ತಪ್ಪು ಮಾಹಿತಿ ನೀಡಿ ರಾಜ್ಯದ ದಾರಿ ತಪ್ಪಿಸಿದ ಗೃಹ ಸಚಿವರ ಮೇಲೆಯೂ ಕೇಸು ದಾಖಲಿಸಬೇಕು. ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

 ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಪಿಎಸ್ಐ ನೇಮಕಾತಿ ಹಗರಣದಲ್ಲಿ ನೇಮಕಾತಿ ಉಸ್ತುವಾರಿ ವಹಿಸಿಕೊಂಡಿದ್ದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ. ಹಗರಣದ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿದಾಗ ಮುಖ್ಯಮಂತ್ರಿಗಳು, ಗೃಹ ಸಚಿವರು ಸೇರಿದಂತೆ ಎಲ್ಲರೂ ನಮ್ಮ ಮೈಮೇಲೆ ಬಂದರು. ಈ ನೇಮಕಾತಿಯಲ್ಲಿ ಯಾವ ಭ್ರಷ್ಟಾಚಾರವೂ ನಡೆದಿಲ್ಲ, ಯಾವ ಅವ್ಯವಹಾರವೂ ನಡೆದಿಲ್ಲ ಎಂದು ಆರಗ ಜ್ಞಾನೇಂದ್ರ ಅವರು ಬಹಳ ವೀರಾವೇಶದಿಂದ ಉತ್ತರ ನೀಡಿದ್ದರು. ಈಗ ಅದೇ ಹಗರಣದಲ್ಲಿ ನೇಮಕಾತಿಯ ಉಸ್ತುವಾರಿ ವಹಿಸಿದ್ದ, ಪೊಲೀಸ್ ಇಲಾಖೆಯ ಎಡಿಜಿಪಿ ಅಮೃತ್ ಪೌಲ್ ಅವರ ಬಂಧನವಾಗಿ, ಅಮಾನತ್ತಾಗಿ, 13ನೇ ತಾರೀಖಿನವರೆಗೆ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆ. ಇದಕ್ಕೆ ಗೃಹ ಸಚಿವರು ಏನೆಂದು ಉತ್ತರಿಸುತ್ತಾರೆ? ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಮಂತ್ರಿ ತಮ್ಮ ಇಲಾಖೆ ಮೇಲೆ ಬಂದ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದರು, ಈಗ ಎಡಿಜಿಪಿ ಒಬ್ಬರನ್ನು ಬಂಧಿಸಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳಲು ಹೊರಟಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕರ್ನಾಟಕದ ಆರೂವರೆ ಕೋಟಿ ಜನರಿಗೆ ವಿಧಾನಸಭೆ ಮೂಲಕ ಸುಳ್ಳು ಹೇಳಿದವರು ಮಂತ್ರಿಯಾಗಿ ಮುಂದುವರೆಯಲು ಲಾಯಕ್ಕಾ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ನಾನು ಅನೇಕ ಬಾರಿ ಇವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡುವಂತೆ ಹೇಳಿದ್ದೆ. ಇವರು ಇಂಥ ಅನೇಕ ಘಟನೆಗಳಲ್ಲಿ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಉದಾಹರಣೆಗೆ ಶಿವಮೊಗ್ಗದಲ್ಲಿ ನಡೆದ ಗಲಭೆ, ಮೈಸೂರಿನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣ, ಹೀಗೆ ಹಲವು ಇವೆ. ಮುಖ್ಯಮಂತ್ರಿಗಳು ಇಂಥ ಒಬ್ಬ ಸಚಿವರನ್ನು ಮಂತ್ರಿ ಮಂಡಲದಲ್ಲಿ ಇಟ್ಟುಕೊಂಡು ಅವರ ಮೂಲಕ ಬೇಜವಾಬ್ದಾರಿ, ಅಸಂಬದ್ಧ ಹಾಗೂ ಸುಳ್ಳು ಹೇಳಿಕೆಯನ್ನು ಕೊಡಿಸುತ್ತಿದ್ದಾರೆ. ಸರ್ಕಾರದ ಒಟ್ಟು ಉದ್ದೇಶ ಇಡೀ ಪ್ರಕರಣವನ್ನು ಮುಚ್ಚಿಹಾಕುವುದಾಗಿತ್ತು ಎಂದು ಆರೋಪಿಸಿದರು.

ನಾವು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸಾಕಷ್ಟು ಬಾರಿ ತನಿಖೆಗೆ ಒತ್ತಾಯ ಮಾಡಿದ್ದೇವೆ. ನಾವು ಮಾರ್ಚ್ ತಿಂಗಳಲ್ಲಿ ತನಿಖೆಗೆ ಒತ್ತಾಯ ಮಾಡಿದ್ದರೆ, ಸರ್ಕಾರ ಏಪ್ರಿಲ್ ನಲ್ಲಿ ಸಿಐಡಿ ತನಿಖೆ ಆರಂಭ ಮಾಡಿಸಿತು. ಸಿಐಡಿ ಇಂದ ನ್ಯಾಯ ಸಿಗಲ್ಲ, ಇದರಲ್ಲಿ ಮಂತ್ರಿಗಳು, ದೊಡ್ಡ ದೊಡ್ಡ ರಾಜಕಾರಣಿಗಳ ಪಾತ್ರ ಇರುವುದರಿಂದ ಸಿಐಡಿ ಅವರನ್ನೆಲ್ಲ ವಿಚಾರಣೆ ಮಾಡಿ ಬಂಧಿಸುವುದು ಕಷ್ಟದ ಕೆಲಸ ಹಾಗಾಗಿ ಈ ಹಗರಣವನ್ನು ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಹಲವು ಬಾರಿ ಒತ್ತಾಯ ಮಾಡಿದ್ದೆ. ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂದು 2022 ಮೇ 26 ರಂದು ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದೆ.    ಈಗ ಅಶ್ವಥ್ ನಾರಾಯಣ್ ಅವರ ಮೇಲೂ ಆರೋಪ ಇದೆ. ಅವರ ಕಡೆಯ 5 ಜನ ಅಕ್ರಮವಾಗಿ ಆಯ್ಕೆಯಾಗಿದ್ದಾರೆ. ಅಶ್ವಥ್ ನಾರಾಯಣ್ ಅವರ ಸಂಬಂಧಿಕರು ಕೂಡ ಬಂಧನಕ್ಕೆ ಒಳಗಾಗಿದ್ದಾರೆ. ಈಗ ಸಿಐಡಿಯವರು ಅಶ್ವಥ್ ನಾರಾಯಣ ಅವರ ಮೇಲೆ ಕ್ರಮ ತೆಗೆದುಕೊಳ್ತಾರಾ? 300 ಜನರ ಓಎಮ್ಆರ್ ಶೀಟ್ ಗಳನ್ನು ತಿದ್ದಲಾಗಿದೆ ಎಂದು ತನಿಖೆಯಲ್ಲಿ ಗೊತ್ತಾಗಿದೆ. ಒಬ್ಬ ಅಭ್ಯರ್ಥಿಗೆ 30 ಲಕ್ಷದಿಂದ 1 ಕೋಟಿ ವರೆಗೂ ವಸೂಲಿ ಮಾಡಿದ್ದಾರೆ. ಈ ಹಣ ಯಾರ್ಯಾರ ಜೇಬಿಗೆ ಹೋಗಿದೆ? ಯಾವ ಮಂತ್ರಿಗೆ ಹೋಗಿದೆ? ಮುಖ್ಯಮಂತ್ರಿಗೆ ಹೋಗಿದೆಯಾ ಇಲ್ಲವಾ? ಇವೆಲ್ಲ ಗೊತ್ತಾಗಬೇಕಲ್ವಾ? ಇವರನ್ನೆಲ್ಲ ರಕ್ಷಣೆ ಮಾಡುತ್ತಿರುವವರು ಈ ರಾಜ್ಯದ ಮುಖ್ಯಮಂತ್ರಿಗಳು ಎಂದು ಸಿದ್ದರಾಮಯ್ಯ ಆರೋಪಿಸಿದರು.



Join Whatsapp