ಬೆಂಗಳೂರು: ದೇಶದುದ್ದಗಲಕ್ಕೂ ಭೀತಿ ಹುಟ್ಟಿಸಿದ್ದ, ಜಾಗತಿಕವಾಗಿ ತೀವ್ರ ಖಂಡನೆಗೆ ಒಳಗಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯ ಕುರಿತಾದ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್ ವಿಚಾರಣೆ ಸೋಮವಾರ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದಲ್ಲಿ ಶುರುವಾಯಿತು.
ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಚಂದ್ರಶೇಖರ ಮೃತ್ಯುಂಜಯ ಜೋಷಿ ಅವರ ಮುಂದೆ ಹಾಜರಾದ ಗೌರಿ ಅವರ ಸಹೋದರಿ ಕವಿತಾ ಅವರು ತಮ್ಮ ಸಹೋದರಿಯ ಕೊಲೆಯಾದ ನಂತರದ ಬೆಳವಣಿಗೆಗಳ ಕುರಿತು ಪ್ರಾಸಿಕ್ಯೂಷನ್ ಮತ್ತು ಪಾಟೀ ಸವಾಲಿನಲ್ಲಿ ವಕೀಲರ ವಿಭಿನ್ನ ಪ್ರಶ್ನೆಗಳಿಗೆ ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಒರೆಸಿಕೊಂಡು ಎದುರಾದರು.
ಹಿಂದುತ್ವವಾದಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್), ಪುರೋಹಿತಶಾಹಿ ವಿಚಾರಗಳನ್ನು ಪ್ರತಿಪಾದಿಸುವವರ ವಿರುದ್ಧ ನಿರಂತರವಾಗಿ ಹೋರಾಟ, ಟೀಕೆ ಮಾಡುತ್ತಿರುವುದರಿಂದ ಅವುಗಳ ಕೆಂಗಣ್ಣಿಗೆ ಗುರಿಯಾಗಿರುವುದಾಗಿ ಗೌರಿ ಲಂಕೇಶ್ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದಿರುವುದನ್ನು ಆಧರಿಸಿ ಗೌರಿ ಹತ್ಯೆಯಲ್ಲಿ ಅವರುಗಳ ಪಾತ್ರದ ಕುರಿತು ಪೊಲೀಸರಿಗೆ ಹೇಳಿಕೆ ನೀಡಿದ್ದೇನೆ ಎಂದು ಪ್ರಾಸಿಕ್ಯೂಷನ್ ಪರ ಮೊದಲ ಸಾಕ್ಷಿಯಾಗಿರುವ ಕವಿತಾ ಲಂಕೇಶ್ ಹೇಳಿದರು.
ಆರೋಪಿಗಳ ಪರವಾಗಿ ಹಾಜರಾಗಿದ್ದ ವಕೀಲರಾದ ಕೃಷ್ಣ ಮೂರ್ತಿ, ಉಮಾಶಂಕರ್, ಗಂಗಾಧರ ಶೆಟ್ಟಿ ಮತ್ತು ರಾಜೇಶ್ ಶ್ಯಾಮ್ ಅವರು ಗೌರಿ ಲಂಕೇಶ್ ಅವರನ್ನು ಪಾಟೀ ಸವಾಲಿಗೆ ಒಳಪಡಿಸಿದರು. ಪ್ರಾಸಿಕ್ಯೂಷನ್ ಪರ ವಿಶೇಷ ಸರ್ಕಾರಿ ಅಭಿಯೋಜಕರ ಎಸ್ ಬಾಲಕೃಷ್ಣನ್ ಹಾಜರಾಗಿದ್ದರು.
ಪೊಲೀಸರಿಗೆ ಹೇಳಿಕೆ ಮತ್ತು ಮರು ಹೇಳಿಕೆ ನೀಡುವಾಗ ಆರ್‌ಎಸ್‌ಎಸ್, ಸಂಘ ಪರಿವಾರದ ಇತರೆ ಸಂಘಟನೆಗಳು, ಪುರೋಹಿತಶಾಹಿ ಮತ್ತು ಹಿಂದುತ್ವವಾದಿಗಳ ವಿರುದ್ಧ ಹೇಳಿಕೆ ನೀಡುವ ಮೂಲಕ ಗೌರಿ ಹತ್ಯೆಯ ನೈಜ ಆರೋಪಿಗಳನ್ನು ಬಚಾವು ಮಾಡಲು ಮತ್ತು ಹಿಂದೂಪರ ಸಂಘಟನೆಗಳತ್ತ ಇಡೀ ಪ್ರಕರಣವನ್ನು ತಿರುಗಿಸುವ ಉದ್ದೇಶ ಹೊಂದಿದ್ದೇನೆ ಎಂಬುದು ಸರಿಯಲ್ಲ ಎಂದು ಆರೋಪಿಗಳ ಪರ ವಕೀಲರ ಪ್ರಶ್ನೆಗಳನ್ನು ಕವಿತಾ ಅವರು ತಳ್ಳಿಹಾಕಿದರು.
ಕೆಲವು ನಕ್ಸಲೀಯ ಮುಖಂಡರನ್ನು ಮುಖ್ಯ ವಾಹಿನಿ ತರಲು ಪ್ರಯತ್ನಿಸಿದ್ದರಿಂದ ಇತರೆ ನಕ್ಸಲೀಯ ಮುಖಂಡರು ಗೌರಿ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದರು ಎಂಬುದು ಸರಿಯಲ್ಲ. ಕೌಟುಂಬಿಕ ಆಸ್ತಿಗೆ ಸಂಬಂಧಿಸಿದಂತೆ ಕುಟುಂಬ ಸದಸ್ಯರ ಜೊತೆ ವೈಮನಸ್ಸು ಇತ್ತು ಎಂಬುದನ್ನು ಒಪ್ಪುವುದಿಲ್ಲ. ಕೊಲೆಯಾಗುವುದಕ್ಕೂ ಎರಡು ದಿನಗಳ ಮುಂದೆ ನನ್ನ ಮನೆಗೆ ಗೌರಿ ಬಂದಿದ್ದಳು. ಅಲ್ಲದೇ, ಕೋಮು ಸೌಹಾರ್ದಕ್ಕೆ ಸಂಬಂಧಿಸಿದ ಸಭೆಗಳನ್ನು ಮನೆಯಲ್ಲಿ ನಡೆಸುತ್ತಿದ್ದರು ಎಂಬುದೂ ಸರಿಯಲ್ಲ ಎಂದು ಹೇಳಿಕೆ ದಾಖಲಿಸಿದರು.
ಸಹೋದರಿ ಗೌರಿಯ ಕಾರಿನಲ್ಲಿ ನಕ್ಸಲ್ ಸಾಹಿತ್ಯ ಇದ್ದ ಬಗ್ಗೆ ನನಗೆ ಗೊತ್ತಿಲ್ಲ. ಅಲ್ಲದೇ ಸಾಕೇತ್ ರಾಜನ್ (ನಕ್ಸಲ್ ಮುಖಂಡ) ಯಾರೂ ಎಂಬುದೂ ನನಗೆ ಗೊತ್ತಿಲ್ಲ. ಆದರೆ, ಕೆಲವು ನಕ್ಸಲ್ ನಾಯಕರು ಆಕೆಯ ಒಡನಾಟದಲ್ಲಿದ್ದರು. ಯುವ ದಲಿತ ನಾಯಕ ಹಾಗೂ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಮತ್ತು ಈಗ ಕಾಂಗ್ರೆಸ್ ಸೇರ್ಪಡೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಅವರು ಗೌರಿಯ ಮಾನಸ ಪುತ್ರರು ಎಂದು ಹೇಳಿದ್ದೇನೆ ಎಂದು ಪಾಟೀ ಸವಾಲಿಗೆ ಉತ್ತರಿಸಿದರು.
ಕವಿ ಹಾಗೂ ನಾಟಕಕಾರ ಗಿರೀಶ್ ಕಾರ್ನಾಡ್, ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಚಂದನ್‌ಗೌಡ, ಜಿಗ್ನೇಶ್ ಮೇವಾನಿ, ಕನ್ಹಯ್ಯ ಕುಮಾರ್ ಅವರ ಜೊತೆ ಗೌರಿ ಅವರಿಗೆ ಒಡನಾಟವಿತ್ತು. ಅವರೆಲ್ಲರೂ ನಕ್ಸಲೀಯರ ಬಗ್ಗೆ ಅನುಕಂಪ ಹೊಂದಿದ್ದವರು ಎಂಬ ಹೇಳಿಕೆ ಸರಿಯಲ್ಲ ಎಂದು ಕವಿತಾ ಹೇಳಿದರು.
ಗೌರಿ ಲಂಕೇಶ್ ಟ್ರಸ್ಟ್‌ನಲ್ಲಿ ಆರಂಭದಲ್ಲಿ ನಾನು ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಹಿರಿಯ ಚೇತನ ದೊರೆಸ್ವಾಮಿ ಇದ್ದೆವು. ಅವರ ಕಾಲನಂತರ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್ ಅವರು ಟ್ರಸ್ಟ್‌ನ ಸದಸ್ಯರಾಗಿದ್ದಾರೆ. ಗೌರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವ್ಯಾಜ್ಯಕ್ಕೆ ತೀಸ್ತಾ ಆರ್ಥಿಕ ನೆರವು ನೀಡಿದ್ದಾರೆ ಎಂಬುದನ್ನು ನಿರಾಕರಿಸುತ್ತೇನೆ. ಅಂತೆಯೇ ಗೌರಿ ಲಂಕೇಶ್‌ಗೂ ನಾನು ಗೌರಿ. ಕಾಂ ಜಾಲತಾಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ಗೌರಿ ಲಂಕೇಶ್ ಜೊತೆ ಕೆಲಸ ಮಾಡುತ್ತಿದ್ದ ಹಿರಿಯ ಪತ್ರಕರ್ತ ಪಾರ್ವತೀಶ್ ಅವರ ನಡುವೆ ಮನಸ್ತಾಪವಿತ್ತು. ಈ ಸಂಬಂಧ ಪಾರ್ವತೀಶ್ ಅವರು ಗೌರಿ ವಿರುದ್ಧ ದಾವೆ ಹೂಡಿದ್ದರು ಎಂಬುದು ನನಗೆ ಗೊತ್ತಿಲ್ಲ. ಎಂದರು. ಇದಕ್ಕೂ ಮುನ್ನ, ಪಾರ್ವತೀಶ್ ಮತ್ತು ಗೌರಿ ಲೀವ್- ಇನ್ ಸಂಬಂಧ ಹೊಂದಿದ್ದರೇ ಎಂಬ ಪ್ರಶ್ನೆಯನ್ನು ಆರೋಪಿಗಳ ಪರ ವಕೀಲ ಕೃಷ್ಣ ಮೂರ್ತಿ ಕೇಳಲು ಮುಂದಾದರು. ಇದಕ್ಕೆ ಪ್ರಾಸಿಕ್ಯೂಷನ್ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ನ್ಯಾಯಾಧೀಶರೂ ಆ ಪ್ರಶ್ನೆಗೆ ಅಸಮ್ಮತಿ ಸೂಚಿಸಿದರು.
ಗೌರಿ ಅವರು ತಮ್ಮ ಸಹೋದ್ಯೋಗಿ (ಹಿರಿಯ ಪತ್ರಕರ್ತ) ಚಿದಾನಂದ ರಾಜಘಟ್ಟ ಅವರನ್ನು ವಿವಾಹವಾಗಿದ್ದರು. ಮನಸ್ತಾಪವಾಗಿ ವಿಚ್ಛೇದನ ಪಡೆದಿದ್ದರು ಎಂಬುದು ಸಲ್ಲ ಎಂದ ಕವಿತಾ ಅವರು ಚಿದಾನಂದ ಅವರನ್ನು ವಿವಾಹವಾಗಿದ್ದರು ಎಂದು ಸೂಚ್ಯವಾಗಿ ತಿಳಿಸಿದರು.
ದಲಿತರು, ಮುಸ್ಲಿಮರು, ಹಿಂದುಳಿದ ವರ್ಗಗಳ ಪರವಾಗಿ ಹೋರಾಟ ಮಾಡುತ್ತಿದ್ದ ಸಹೋದರಿ ಗೌರಿ ಅವರು ಕೊಲೆಯಾಗುವುದಕ್ಕೂ ಮುನ್ನ ಮನೆಯ ಮುಂದೆ ಯಾರೋ ಸಂಶಯಾಸ್ಪದವಾಗಿ ಓಡಾಡುತ್ತಿದ್ದಾರೆ ಎಂದು ಹೇಳಿದ್ದರು. ದೂರು ನೀಡುವಂತೆ ಸೂಚಿಸಿದ್ದಕ್ಕೆ ಸ್ವಲ್ಪ ದಿನ ನೋಡೋಣ ಎಂದು ಹೇಳಿದ್ದಾಗಿ ಕವಿತಾ ವಿವರಿಸಿದರು. ಗೌರಿ ಲಂಕೇಶ್ ಹತ್ಯೆ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸುವಂತೆ ತಾವು ಸರ್ಕಾರವನ್ನು ಕೋರಿರಲಿಲ್ಲ ಎಂದು ಸ್ಪಷ್ಟಪಡಿಸಿದ ಅವರು ಕೊಲೆಯಾದ ದಿನದ ಘಟನೆ ಹಾಗೂ ದೂರು ನೀಡಿದ್ದಕ್ಕೆ ಉತ್ತರಿಸಿದರು.
ಪ್ರಾಸಿಕ್ಯೂಷನ್ ನಾಲ್ಕನೇ ಸಾಕ್ಷಿ ಅನಿಲ್ ಕುಮಾರ್
ಗೌರಿ ಹತ್ಯೆಯಲ್ಲಿ ಪ್ರಾಸಿಕ್ಯೂಷನ್ ಪರ ನಾಲ್ಕನೇ ಸಾಕ್ಷಿಯಾಗಿರುವ ಶ್ರೀರಂಗಪಟ್ಟಣ ತಾಲ್ಲೂಕಿನ ಬಾಬುರಾಯನ ಕೊಪ್ಪಲಿನ 29 ವರ್ಷದ ಅನಿಲ್ ಕುಮಾರ್ ಅವರು ಪ್ರಕರಣದಲ್ಲಿ 18ನೇ ಆರೋಪಿಯಾಗಿರುವ ಕೆ ಟಿ ನವೀನ್ ಕುಮಾರ್ ಅವರ ಸಂಪರ್ಕ ಹಾಗೂ ಇತರ ಆರೋಪಿಗಳ ಕುರಿತು ಪ್ರಾಸಿಕ್ಯೂಷನ್ ಮತ್ತು ಪಾಟೀ ಸವಾಲಿಗೆ ಉತ್ತರಿಸಿದರು. ಇದಕ್ಕೂ ಮುನ್ನ ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಮತ್ತು ಮಹಾರಾಷ್ಟ್ರದ ಜೈಲಿನಿಂದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಹಾಜರಾಗಿದ್ದ ನವೀನ್ ಕುಮಾರ್, ಮೊದಲ ಆರೋಪಿ ಅಮೋಲ್ ಕಾಳೆ, 13ನೇ ಆರೋಪಿ ಸುಜಿತ್ ಕುಮಾರ್ (ತಪ್ಪಾಗಿ ಪ್ರವೀಣ್ ಎಂದು ಹೆಸರು ಹೇಳಿದ), 5ನೇ ಆರೋಪಿ ಅಮಿತ್ ದಿಗ್ವೇಕರ್ ಅವರನ್ನು ಅನಿಲ್‌ಕುಮಾರ್ ಗುರುತಿಸಿದರು.
ಹಿಂದುತ್ವ ಧರ್ಮ ಜಾಗರಣೆಯ ಉಮೇಶ್ ಅವರ ಮೂಲಕ 2017ರಲ್ಲಿ ನವೀನ್ ಕುಮಾರ್ ಅವರನ್ನು ಮೈಸೂರಿನ ಮಹಾರಾಣಿ ಕಾಲೇಜು ಪಾರ್ಕ್‌ನಲ್ಲಿ ಮೊದಲಿಗೆ ಭೇಟಿ ಮಾಡಿಸಿದ್ದರು. ಹಿಂದೂ ಸಂಘಟನೆಗಳ ಜೊತೆ ಗುರುತಿಸಿಕೊಂಡಿದ್ದರಿಂದ ಶಾಲೆಯೊಂದರಲ್ಲಿ ಮರದ ಕೊಂಬೆ ಕತ್ತರಿಸುವುದಕ್ಕೆ ಸಂಬಂಧಿಸಿದಂತೆ ಮುಸ್ಲಿಮ್ ಸಮುದಾಯದ ಜೊತೆ ಮನಸ್ತಾಪ ಉಂಟಾಗಿತ್ತು. ಈ ವಿಚಾರವನ್ನು ಉಮೇಶ್ ಅವರ ಗಮನಕ್ಕೆ ತರಲಾಗಿ ಅವರು ನವೀನ್ ಅವರನ್ನು ಭೇಟಿ ಮಾಡಿಸಿದ್ದರು ಎಂದು ಅನಿಲ್ ಕುಮಾರ್ ವಿವರಿಸಿದರು.
ಶ್ರೀರಂಗಪಟ್ಟಣದಲ್ಲಿ ಮೊಬೈಲ್ ರಿಪೇರಿ ಅಂಗಡಿ ಇಟ್ಟುಕೊಂಡಿದ್ದ ಅನಿಲ್ ಕುಮಾರ್ ಅವರು ನವೀನ್ ಅವರನ್ನು ಶ್ರೀರಂಗಪಟ್ಟಣದಲ್ಲಿ ಭೇಟಿ ಮಾಡಿದ್ದರು. ಇನ್ನೊಂದು ಬಾರಿ ಶ್ರೀರಂಗಪಟ್ಟಣದಲ್ಲಿ ಭೇಟಿ ಮಾಡಿದ್ದಾಗ ಗನ್ ಅನ್ನು ಸ್ಪರ್ಶ ಮಾಡಿಸಿದ್ದರು. ಇದನ್ನು ಮೊದಲಿಗೆ ಮೂಳೆ ಎಂದು ಕೊಂಡಿದ್ದೆ ಎಂದರು. ನವೀನ್ ಅವರು ಆ ಗನ್ ಹಿಂದೂ ಉಗ್ರ ಹೋರಾಟಕ್ಕೆ ಇಟ್ಟುಕೊಂಡಿದ್ದೇನೆ. ಏನಾದರೂ ತೊಂದರೆಯಾದರೆ ತಿಳಿಸು ಎಂದು ಹೇಳಿದ್ದಾಗಿ ವಿವರಿಸಿದರು.
ಆನಂತರ ಒಂದು ಸಾವಿರ ರೂಪಾಯಿ ನೀಡಿ ಮೈಸೂರಿನಲ್ಲಿ ಏರ್ ಗನ್ ಖರೀದಿಸಲು ನವೀನ್ ಸೂಚಿಸಿದ್ದರು. ನಾನು ನನ್ನ ಕೈಯಿಂದ ಒಂದು ಸಾವಿರ ರೂಪಾಯಿ ಹಾಕಿ ಒಂದು ಏರ್ ಗನ್, 16 ಸಣ್ಣ ಗುಂಡುಗಳನ್ನು ಖರೀದಿಸಿದ್ದೆ. ಇದನ್ನು ಮದ್ದೂರಿಗೆ ತರುವಂತೆ ನವೀನ್ ಹೇಳಿದ್ದರು. ಅದನ್ನು ನೀಡಲು ಅಲ್ಲಿಗೆ ತೆರಳಿದ್ದಾಗ “ದೊಡ್ಡ ಸುದ್ದಿ” ಗೊತ್ತಾ ಎಂದು ಕೇಳಿದ್ದರು. ಅದೇ ಗೌರಿ ಲಂಕೇಶ್ ಕೊಲೆ ಸುದ್ದಿ ಎಂದರು. ನಾನು ಅದಕ್ಕೆ ಗೊತ್ತಿದೆ ಎಂದು ಹೇಳಿದ್ದೆ. ಅದಕ್ಕೆ ನವೀನ್ ಅವರು ನಕ್ಕಿದ್ದರು ಎಂದು ವಿವರಿಸಿದರು.
ಏರ್‌ಗನ್‌ನಿಂದ ಅಭ್ಯಾಸ ಮಾಡು: ಹಿಂದೂಗಳ ಪರ ಹೋರಾಟ ಮಾಡಲು ಏರ್‌ಗನ್ ಬೇಕಾಗುತ್ತದೆ. ಇದರಿಂದ ಅಭ್ಯಾಸ ಮಾಡು. ಇದು ನಮ್ಮ ರಕ್ಷಣೆಗೆ ಬೇಕಾಗುತ್ತದೆ ಎಂದು ನವೀನ್ ಹೇಳಿದ್ದರು. (ಪ್ರಗತಿಪರ ಚಿಂತಕ) ಕೆ ಎಸ್ ಭಗವಾನ್ ಅವರು ಹಿಂದೂ ದೇವರಿಗೆ ಬಯ್ಯುತ್ತಾರೆ ಗೊತ್ತಾ ಎಂದು ಕೇಳಿದ್ದರು. ಇದಕ್ಕೆ ಹೌದು ಎಂದು ಹೇಳಿದ್ದಾಗಿ ತಿಳಿಸಿದರು.
ʼಡೇಂಜರ್ʼ ಎಂದಿದ್ದೆ: ಇದಾದ ಸ್ವಲ್ಪ ದಿನದ ಬಳಿಕ ಮದ್ದೂರಿನ ಸಿಪಾಯಿ ಸೀನಣ್ಣ ಅವರ ತೋಟಕ್ಕೆ ಕರೆಯಿಸಿಕೊಂಡಿದ್ದರು. ಅಲ್ಲಿಗೆ ಗೆಳೆಯ ಯೋಗೇಶ್ ಜೊತೆಗೆ ನಾನು ಬೈಕಿನಲ್ಲಿ ತೆರಳಿದ್ದೆ. ನನ್ನ ಗೆಳೆಯರಾದ ಅಭಿಷೇಕ್ ಮತ್ತು ಗಿರೀಶ್ ಯಾರನ್ನೂ ಬಿಡದೇ ನನ್ನನ್ನು ನವೀನ್ ಕುಮಾರ್ ಅವರು ಸಿಪಾಯಿ ಸೀನಣ್ಣ ಅವರ ತೋಟದ ಮನೆಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ನವೀನ್ ಅವರನ್ನೂ ಸೇರಿ ಐವರು ಇದ್ದರು. ಅಲ್ಲಿ ಒಬ್ಬರು ಸರ್ಕೀಟ್ ಮಾಡಲು ಬರುತ್ತದೆಯೇ ಎಂದು ಕೇಳಿದ್ದರು. ಇದಕ್ಕೆ ನಾನು ಗೊತ್ತಿಲ್ಲ. ಆದರೆ, ಕಲಿತುಕೊಳ್ಳುತ್ತೇನೆ ಎಂದು ಹೇಳಿದ್ದೆ. ಆನಂತರ ನವೀನ್ ಅವರು ನನ್ನನ್ನು ಕರೆದು ಮನೆಯೊಳಗೆ ಭೇಟಿ ಮಾಡಿದವರನ್ನು ನೋಡಿದರೆ ಏನೆನ್ನಿಸುತ್ತದೆ ಎಂದು ಪ್ರಶ್ನಿಸಿದ್ದರು. ಅದಕ್ಕೆ ʼಡೇಂಜರ್ʼ ಎನಿಸುತ್ತದೆ ಎಂದು ಹೇಳಿದ್ದಾಗಿ ವಿವರಿಸಿದರು. ಆನಂತರ ಗುಂಡಾಲ್ ಜಲಾಶಯಕ್ಕೆ ಹೋಗಿ ವಾಪಸ್ ಬಂದಿದ್ದೆವು. ಅವರೆಲ್ಲರೂ ಬೆಂಗಳೂರಿಗೆ ವಾಪಸ್ ಆದರು ಎಂದು ವಿವರಿಸಿದರು.
ಈ ಘಟನೆಯ ಕುರಿತು ಆರೋಪಿಗಳ ಪರ ವಕೀಲರು ಅನಿಲ್‌ಕುಮಾರ್ ಅವರನ್ನು “ಪೊಲೀಸರ ಒತ್ತಡಕ್ಕೆ ಮಣಿದು ಈ ರೀತಿ ಹೇಳಿಕೆ ನೀಡುತ್ತಿದ್ದೀರಿ” ಎಂಬುದನ್ನು ಅವರು ನಿರಾಕರಿಸಿದರು.
2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರು ಕೆಲಸ ಮುಗಿಸಿ ಮನೆಗೆ ಮರಳಿದ್ದಾಗ ಗುಂಡು ಹಾರಿಸಿ ಕೊಲ್ಲಲಾಗಿತ್ತು. ಅಮೋಲ್ ಕಾಳೆ, ಪರಶುರಾಮ್ ವಾಗ್ಮೊರೆ, ಗಣೇಶ್ ಮಿಸ್ಕಿನ್, ಅಮಿತ್ ಬಾಡ್, ಅಮಿತ್ ದೆಗ್ವೇಕರ್, ಭರತ್ ಕುರಣೆ, ಸುರೇಶ್ ಹೆಚ್ ಎಲ್, ರಾಜೇಶ್ ಬಂಗೇರ, ಸುಧನ್ವ ಗೊಂದಲೇಕರ್, ಶರದ್ ಕಲಾಸ್ಕರ್, ಮೋಹನ್ ನಾಯಕ್, ವಾಸುದೇವ್ ಸೂರ್ಯವಂಶಿ, ಸುಜಿತ್ ಕುಮಾರ್, ಮನೋಹರ ಎಡವೆ, ವಿಕಾಸ್ ಪಾಟೀಲ್, ಶ್ರೀಕಾಂತ್ ಪಂಗರ್ಕರ್, ಕೆ ಟಿ ನವೀನ್ ಕುಮಾರ್ ಮತ್ತು ರುಶಿಕೇಶ್ ದಿಯೋದಿಕರ್ ಪ್ರಕರಣದ ಆರೋಪಿಗಳಾಗಿದ್ದಾರೆ.
ಬೆಂಗಳೂರಿನ ರಾಜರಾಜೇಶ್ವರಿ ನಗರ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302, 120ಬಿ, 114, 118, 109, 201, 203, 204 ಮತ್ತು 35, ಸಶಸ್ತ್ರ ಕಾಯಿದೆಯ ಸೆಕ್ಷನ್‌ಗಳಾದ 25(1), 25(1B), 27(1) ಮತ್ತು ಕೋಕಾ ಕಾಯಿದೆಯ ಸೆಕ್ಷನ್‌ಗಳಾದ 3(1)(I), 3(2), 3(3), 3(4) ಅಡಿ ಪ್ರಕರಣ ದಾಖಲಿಸಲಾಗಿದೆ.
(ಕೃಪೆ: ಬಾರ್ ಆ್ಯಂಡ್ ಬೆಂಚ್)