ರಾಹುಲ್ ಗಾಂಧಿ ಹೇಳಿಕೆ ತಿರುಚಿದ ಪ್ರಕರಣ: Zee News ನಿರೂಪಕ ರೋಹಿತ್ ರಂಜನ್ ಬಂಧನ

Prasthutha|

ನೋಯ್ಡ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬಗ್ಗೆ ತಪ್ಪುದಾರಿಗೆಳೆಯುವಂತಹ ವೀಡಿಯೋ ತುಣುಕುಗಳನ್ನು ಪ್ರಸಾರ ಮಾಡಿದ ಆರೋಪದ ಮೇಲೆ ಜೀ ನ್ಯೂಸ್ ನಿರೂಪಕ ರೋಹಿತ್ ರಂಜನ್ ಅವರನ್ನು ನೋಯ್ಡಾ ಪೊಲೀಸರು ಮಂಗಳವಾರ ಗಾಜಿಯಾಬಾದ್ ನಲ್ಲಿ ಬಂಧಿಸಿದ್ದಾರೆ.

- Advertisement -

ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ತಿರುಚಿ ಉದ್ದೇಶಪೂರ್ವಕವಾಗಿ ಸುಳ್ಳು ಸುದ್ದಿ ಹಬ್ಬಿಸಿದ ಆರೋಪದ ಮೇಲೆ ಝೀ ಟಿವಿಯ ನಿರೂಪಕ ರಂಜನ್ ಮತ್ತು ಬಿಜೆಪಿಯ ಇತರ ನಾಯಕರ ವಿರುದ್ಧ ನೋಯ್ಡಾ ಸೆಕ್ಟರ್-20 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದಕ್ಕೂ ಮುನ್ನ ಛತ್ತೀಸ್ ಗಢ ಪೊಲೀಸರ ತಂಡವೊಂದು ರಂಜನ್ ಅವರನ್ನು ಬಂಧಿಸಲು ನೋಯ್ಡಾದಲ್ಲಿರುವ ನಿವಾಸಕ್ಕೆ ಆಗಮಿಸಿತ್ತು.

- Advertisement -

“ಛತ್ತೀಸ್ ಗಢ ಪೊಲೀಸರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡದೆ ನನ್ನನ್ನು ಬಂಧಿಸಲು ನನ್ನ ಮನೆಯ ಹೊರಗೆ ನಿಂತಿದ್ದಾರೆ, ಇದು ಕಾನೂನುಬದ್ಧವೇ” ಎಂದು ಪತ್ರಕರ್ತ ಟ್ವೀಟ್ ಮಾಡಿದ್ದರು.

“ಮಾಹಿತಿ ನೀಡಲು ಅಂತಹ ಯಾವುದೇ ನಿಯಮವಿಲ್ಲ. ಆದರೂ, ಈಗ ಅವರಿಗೆ ಮಾಹಿತಿ ನೀಡಲಾಗಿದೆ. ಪೊಲೀಸ್ ತಂಡವು ನಿಮಗೆ ನ್ಯಾಯಾಲಯದ ಬಂಧನದ ವಾರಂಟ್ ಅನ್ನು ತೋರಿಸಿದೆ. ನೀವು ನಿಜವಾಗಿಯೂ ಸಹಕರಿಸಬೇಕು, ತನಿಖೆಯಲ್ಲಿ ಪಾಲ್ಗೊಳ್ಳಬೇಕು ಮತ್ತು ನಿಮ್ಮ ಪ್ರತಿವಾದವನ್ನು ನ್ಯಾಯಾಲಯದಲ್ಲಿ ಇಡಬೇಕು” ಎಂದು ರಾಯ್ಪುರ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

ಉದಯಪುರ ಹತ್ಯೆ ಆರೋಪಿಗಳು ಚಿಕ್ಕವರು, ಅವರಿಗೆ ಕ್ಷಮೆ ನೀಡಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದರು ಎಂದು ಯಾವುದೋ ಹಳೆಯ ವೀಡಿಯೋ ತುಣುಕನ್ನು ತೋರಿಸಿ ಝೀ ಟಿವಿ ವರದಿ ಮಾಡಿತ್ತು.



Join Whatsapp