ಉಳ್ಳಾಲ: ಈಜಲು ಹೋಗಿದ್ದ ಐವರು ವಿದ್ಯಾರ್ಥಿಗಳ ಪೈಕಿ ಓರ್ವ ನೀರುಪಾಲಾದ ಘಟನೆ ತಲೆಮೊಗರಿನ ಸಜೀಪ ನಡುವಿನ ನೇತ್ರಾವತಿ ನದಿಯಲ್ಲಿ ನಡೆದಿದೆ.
ತಲೆಮೊಗರು ನಿವಾಸಿ ಅಶ್ವಿತ್ (19) ನೀರುಪಾಲಾದ ಯುವಕ ಎಂದು ಗುರುತಿಸಲಾಗಿದೆ.
ಅಶ್ವಿತ್ ಗೆಳೆಯರ ಜೊತೆ ಸಮೀಪದ ನೇತ್ರಾವತಿ ನದಿಗೆ ನೀರಾಟವಾಡಲು ತೆರಳಿದ್ದರು. ಈ ವೇಳೆ ಅಶ್ವಿತ್ ಮತ್ತು ಹರ್ಷ ನೀರುಪಾಲಾಗಿದ್ದು, ಜತೆಯಲ್ಲಿದ್ದ ಯುವಕರು ಹರ್ಷನನ್ನು ರಕ್ಷಿಸಿ ಮೇಲಕ್ಕೆತ್ತಿದ್ದಾರೆ. ಯುವಕರ ಕೂಗು ಕೇಳಿಸಿ ಸ್ಥಳಕ್ಕೆ ದೌಡಾಯಿಸಿದ ಸ್ಥಳೀಯರು ಗಂಭೀರ ಸ್ಥಿತಿಯಲ್ಲಿದ್ದ ಹರ್ಷನಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆ ಸೇರಿಸಿದ್ದಾರೆ. ನೀರು ಪಾಲಾದ ಅಶ್ವಿತ್ ಗಾಗಿ ಸ್ಥಳೀಯ ದೋಣಿಗಾರರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.