ಪಣಜಿ: ತಾವು ರಾಜಕೀಯ ಪಕ್ಷಕ್ಕೆ ಸೇರಿದವರೆಂದು ಮಹಾರಾಷ್ಟ್ರ ಬಂಡಾಯ ಶಾಸಕರ ಜೊತೆ ಡೊನಾ ಪೌಲಾ ಸ್ಟಾರ್ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದ ಮಹಿಳೆ, ಓರ್ವ ವ್ಯಕ್ತಿಯನ್ನು ಗೋವಾ ಪೊಲೀಸರು ಬಂಧಿಸಿದ್ದಾರೆ.
ರೆಬೆಲ್ ಶಾಸಕರು ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಸಂದರ್ಭದಲ್ಲಿ ಬಿಗಿ ಭದ್ರತೆ ನೀಡಲಾಗಿತ್ತು. ಸಾರ್ವಜನಿಕರು, ಮಾಧ್ಯಮದವರಿಗೂ ಪ್ರವೇಶ ನಿಷೇಧಿಸಲಾಗಿತ್ತು. ಆದರೆ ಈ ಜೋಡಿ, ತಾವು ರೆಬೆಲ್ ಶಾಸಕರ ಗುಂಪಿಗೆ ಸೇರಿದವರು ಎಂದು ಸುಳ್ಳು ಹೇಳಿ ಹೋಟೆಲ್ ನಲ್ಲಿ ಒಂದು ದಿನ ತಂಗಿದ್ದರು. ತಪಾಸಣೆ ನಡೆಸಿದಾಗ ಸುಳ್ಳು ದಾಖಲೆ ನೀಡಿದ್ದು ಗೊತ್ತಾಗಿ ಮಹಿಳೆ ಮತ್ತು ಪುರುಷನನ್ನು ಪೊಲೀಸರು ಬಂಧಿಸಿದ್ದಾರೆ.
ಹೋಟೆಲ್ ಸುತ್ತ ನಿರ್ಬಂಧ ಹೇರಿದಾಗಲೂ ಈ ಜೋಡಿ ಬಂದದ್ದು ಹೇಗೆ ಎಂಬ ಬಗ್ಗೆ ಈಗ ತನಿಖೆ ಶುರುವಾಗಿದೆ.
ಅಲ್ಲದೇ ಒಂದು ದಿನ ಹೋಟೆಲ್ ನಲ್ಲಿ ಉಳಿದುಕೊಂಡರೂ ಯಾರ ಗಮನಕ್ಕೆ ಬರಲಿಲ್ಲ ಹೇಗೆ ಎಂಬ ಬಗ್ಗೆ ಪೊಲೀಸರೂ, ಹೋಟೆಲ್ ನವರೂ ತಲೆ ಕೆಡಿಸಿಕೊಂಡಿದ್ದಾರೆ. ಬಂಧಿತರ ಹೆಸರು, ಮಾಹಿತಿಯನ್ನು ಪೊಲೀಸರು ಸದ್ಯ ಬಹಿರಂಗಪಡಿಸಿಲ್ಲ. ಶಿಂಧೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಗೋವಾದಲ್ಲಿ ತಂಗಿದ್ದ ಶಿವಸೇನೆ ಬಂಡಾಯ ಶಾಸಕರು ನಿನ್ನೆ ಮಹಾರಾಷ್ಟ್ರಕ್ಕೆ ಮರಳಿದ್ದಾರೆ.