ದೇವೇಗೌಡರ ಬಗ್ಗೆ ಅವಹೇಳನಕಾರಿ ಹೇಳಿಕೆ: ಕೆ.ಎನ್. ರಾಜಣ್ಣ ವಿರುದ್ಧ ಎಚ್ ಡಿಕೆ ಕಿಡಿ

Prasthutha|

ಬೆಂಗಳೂರು: ಮಾಜಿ ಶಾಸಕ ಕೆ.ಎನ್. ರಾಜಣ್ಣ ಹೇಳಿಕೆ ವಿರುದ್ಧ ಸಿಡಿದೆದ್ದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಅತ್ಯಂತ ಅನಾಗರಿಕವಾಗಿ ಮತ್ತು ವಿಕೃತವಾಗಿ ಮಾತನಾಡಿರುವ ರಾಜಣ್ಣ ಅವರಿಗೆ ತಕ್ಕ ಪಾಠ ಕಲಿಸುತ್ತೇನೆ ಎಂದು ಗುಡುಗಿದ್ದಾರೆ.

- Advertisement -

ದೇವೇಗೌಡರ ಬಗ್ಗೆ ವಿಕೃತವಾಗಿ ಮಾತನಾಡಿರುವ ರಾಜಣ್ಣ ತನ್ನ ಹೀನ ಸಂಸ್ಕೃತಿಯನ್ನು ಪ್ರದರ್ಶನ ಮಾಡಿದ್ದಾರೆ. ಈ ದುರಹಂಕಾರದ ಮಾತುಗಳಿಗೆ ಅವರು ತಕ್ಕ ಶಾಸ್ತಿ ಅನುಭವಿಸಲಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜನತಾಮಿತ್ರ ಕಾರ್ಯಕ್ರಮದಲ್ಲಿ ಭಾಷಣ ಮಾಡುತ್ತಿದ್ದ ವೇಳೆಯೇ ಆಕ್ರೋಶ ಹೊರ ಹಾಕಿದ ಎಚ್ ಡಿಕೆ, ಕಳೆದ 2004ರಲ್ಲಿ ರಾಜಣ್ಣ ಅವರು ಬೆಳ್ಳಾವಿ ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಚುನಾವಣೆಯ ಕೊನೆಯ ದಿನ ದೇವೇಗೌಡರು ಹೋಗಿ ಪ್ರಚಾರ ಮಾಡಿದ್ದರು. ಆದ್ದರಿಂದ ಆ ವ್ಯಕ್ತಿ ವಿಧಾನಸೌಧದ ಮೆಟ್ಟಿಲು ಹತ್ತಲು ಸಾಧ್ಯವಾಯಿತು. ಇಲ್ಲದಿದ್ದರೆ ಅವರನ್ನು ಯಾರು ಕೇಳುತ್ತಿದ್ದರು ಎಂದು ಕಿಡಿ ಕಾರಿದರು.

- Advertisement -

ದೇವೇಗೌಡರು ಅಂದು ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ತೆರಳಿ ಪ್ರಚಾರ ಮಾಡಿದ್ದರು. ಇಬ್ಬರು ದೇವೇಗೌಡರ ಹೆಗಲಿಗೆ ಹೆಗಲು ಕೊಡುತ್ತಾರೆ, ನಿಜ. ರಾಜಣ್ಣನವರಿಗೆ ಅರಿವಿದ್ದಂತೆ ಇಲ್ಲ. ದೇವಸ್ಥಾನದ ಆವರಣದಲ್ಲಿ ಪೂಜೆ ಸಲ್ಲಿಸುತ್ತೇವೆ. ದೇವರ ಮೆರವಣಿಗೆಗೂ ಭುಜ ಕೊಡುತ್ತೇವೆ. ಭುಜ ಕೊಟ್ಟೇ ಮೆರವಣಿಗೆ ಮಾಡೋದಲ್ಲವೇ? ದೇವೇಗೌಡರು ಕೂಡ ಹಾಗೆಯೇ, ನಮ್ಮ ಪಾಲಿಗೆ ಅವರು ದೈವವೇ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ರಾಜಣ್ಣನ ಮಾತಿನ ದುರಹಂಕಾರ ಕೇಳಿದ್ದೇನೆ. ಆತ ಬ್ರಹ್ಮನಲ್ಲ, ಆತನೂ ಒಬ್ಬ ಹುಲು ಮಾನವ. ದೇವೇಗೌಡರು ಶತಾಯುಷಿಗಳಾಗಿ ನಾಡಿನಲ್ಲಿ ಬದುಕುತ್ತಾರೆ ಎಂಬ ನಂಬಿಕೆ ನನ್ನದು ಎಂದ ಅವರು, ಹಲವಾರು ಒತ್ತಡಗಳಿಂದ ತುಮಕೂರಿನಲ್ಲಿ ದೇವೇಗೌಡರನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿದರು. ಅವರನ್ನು ಸೋಲಿಸಲು ಕುತಂತ್ರ ನಡೆಸಿದ್ದು ಇದೇ ರಾಜಣ್ಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೆರಡು ಮೂರು ತಿಂಗಳು ನೋಡಲಿ. ದೇವೇಗೌಡರೇ ಸ್ವತಂತ್ರವಾಗಿ ಓಡಾಡುತ್ತಾರೆ ಎಂದ ಹೆಚ್ ಡಿಕೆ, ಕ್ಷಮೆ ಕೇಳಬೇಕು ಅಂತಾ ಹೇಳುವುದಿಲ್ಲ. ದೇವೇಗೌಡರ ಮಗ ನಾನು ಇನ್ನೂ ಬದುಕಿದ್ದೇನೆ. ಮಧುಗಿರಿಗೆ ಬಂದು ತೋರಿಸುತ್ತೇನೆ. ನಾನು ಉತ್ತರ ಕೊಡುವುದಲ್ಲಾ, ಅಲ್ಲಿನ ಜನರಿಂದಲೇ ಉತ್ತರ ಕೊಡಿಸುತ್ತೇನೆ ಎಂದು ರಾಜಣ್ಣ ವಿರುದ್ಧ ತೊಡೆತಟ್ಟಿದರು.



Join Whatsapp