ಸ್ಮಾರ್ಟ್ ಸಿಟಿಯಾಗಿ ಹಾಸನ ಅಭಿವೃದ್ಧಿ

Prasthutha|

►ಹುಡಾ ನೂತನ ಬಡಾವಣೆಯಲ್ಲಿ ಡಿಸೆಂಬರ್‌ ಗೆ ನಿವೇಶನ ಹಂಚಿಕೆ: ಪ್ರೀತಂಗೌಡ

- Advertisement -

ಹಾಸನ: ನಗರವನ್ನು ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಪಡಿಸಬೇಕು ಎಂಬುದು ನನ್ನ ಗುರಿಯಾಗಿದ್ದು, ಆ ನಿಟ್ಟಿನಲ್ಲಿ ಪೂರಕ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಪ್ರೀತಂ ಜೆ.ಗೌಡ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಹಾಗೂ ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಅನೇಕ ಯೋಜನೆ ತಂದಿದ್ದೇನೆ. ಇವುಗಳಲ್ಲಿ ಶೇ.50 ರಷ್ಟು ವಿವಿಧ ಕಾಮಗಾರಿ ಮುಗಿದಿವೆ. ಉಳಿದವು ವರ್ಷಾಂತ್ಯದೊಳಗೆ ಪೂರ್ಣಗೊಳ್ಳಲಿವೆ ಎಂದು ಮಾಹಿತಿ ನೀಡಿದರು.

- Advertisement -

ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮ ಹಾಗೂ ನಗರಸಭೆಯ 35 ವಾರ್ಡ್ ವ್ಯಾಪ್ತಿಯಲ್ಲಿ ಲೈಟ್, ಚರಂಡಿ, ಫುಟ್‌ಪಾತ್, ಬೀದಿ ವ್ಯಾಪಾರಿಗಳಿಗೆ ಅನುಕೂಲ, ಫುಡ್ ಪಾರ್ಕ್, ಗುಂಡಿ ಮುಕ್ತ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ ಎಂದರು. ಅಮೃತ್ ಯೋಜನೆ ಕುಡಿಯುವ ನೀರು ಕಾಮಗಾರಿಯೂ ಪ್ರಗತಿಯಲ್ಲಿದೆ.

ನಾನು ಎಷ್ಟು ಅನುದಾನ ತಂದಿದ್ದೇನೆ ಎಂಬುದರ ಬಗ್ಗೆ ಎಲ್ಲಾ ಕಾಮಗಾರಿ ಮುಗಿಸಿದ ಬಳಿಕ ಲೆಕ್ಕ ಕೊಡುವೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಎಷ್ಟು ತಂದಿದ್ದೇನೆ ಎನ್ನುವುದಕ್ಕಿಂತ ಎಷ್ಟು ತರಬೇಕು ಎಂಬ ಕಡೆಗೆ ನನ್ನ ಗಮನ ಎಂದ ಅವರು, ಅಂತಿಮವಾಗಿ ಏರ್ಪೋರ್ಟ್ ನಿರ್ಮಾಣ, ಕ್ಷೇತ್ರದ ಜನರ ಆಸೆ ಹೇಗೆ ಸಾಕಾರಗೊಂಡಿದೆ, ಮಹಾರಾಜ ಪಾರ್ಕ್ ಅಭಿವೃದ್ಧಿ, ರಿಂಗ್ ರಸ್ತೆ, ಹಳ್ಳಿ ಅಭಿವೃದ್ಧಿ, ಯುಜಿಡಿಗೆ 165 ಕೋಟಿ ಹೀಗೆ ಇಲಾಖಾವಾರು ಅಭಿವೃದ್ಧಿ ಬಗ್ಗೆ ಕಿರು ಹೊತ್ತಿಗೆ ಮಾಡಿ ಹಂಚುವೆ ಎಂದರು. ಹಿಂದೆ ಇದ್ದವರೂ ಅಭಿವೃದ್ಧಿ ಮಾಡಿದ್ದಾರೆ. ಅದರ ಜೊತೆಗೆ ನನ್ನ ಕೊಡುಗೆಯೂ ಇದೆ. ನನ್ನ ಕನಸಿನ ಯೋಜನೆ ಸ್ವಚ್ಛತೆ, ಗುಂಡಿಮುಕ್ತ ನಗರ ಹಾಗೂ ಕುಡಿಯುವ ನೀರಿಗೆ ಆದ್ಯತೆ ಎಂದು ನುಡಿದರು.

2023 ಕ್ಕೂ ನಾನೇ ಶಾಸಕನಾಗುವೆ, ಯಾವುದೇ ಅನುಮಾನ ಬೇಡ ಎಂದು ವಿಶ್ವಾಸ ವ್ಯಕ್ತಪಡಿಸಿದ ಪ್ರೀತಂ, ಇದಕ್ಕಾಗಿ ಈಗಿನಿಂದಲೇ ಯೋಜನೆ ರೂಪಿಸಿ ಟಾಸ್ಕ್ ಫೋರ್ಸ್ ಸಮಿತಿ ಮಾಡಿದ್ದೇವೆ ಎಂದರು.

ಉದ್ದೇಶಿತ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಸರ್ಕಾರದಿಂದ ನಿರ್ದೇಶನ ಬಂದಿದೆ ಜಿಓ ಕೂಡ ಆಗಿದೆ. ಕಾಂಪೌಂಡ್ ನಿರ್ಮಾಣ ನಂತರ ಕಾಮಗಾರಿ ಆರಂಭವಾಗಲಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ನಗರದ ಕೆಲ ಠಾಣೆಗಳು ರೌಡಿಗಳ ತಾಣವಾಗಿವೆ ಎಂಬ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಕ್ಕೆ ರೌಡಿಗಳು ರಾತ್ರೋರಾತ್ರಿ ಉತ್ಪತ್ತಿ ಆಗಲ್ಲ. ನಾನು 2014-15 ರಿಂದ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಹಿಂದಿನಿಂದ ಯಾರ ಕೃಪಾಪೋಷಿತರಿಂದ ರೌಡಿಸಂ ಹೆಚ್ಚಾಗಿದೆ ಎಂದು ಜನರಿಗೆ ಗೊತ್ತಿದೆ ಎಂದು ಟಾಂಗ್ ನೀಡಿದರು. ಅಂಥವರು ನನ್ನೊಂದಿಗಿಲ್ಲ. ಇಸ್ಪೀಟ್, ಮಟ್ಕಾದಂಧೆ ಆಡಿಸುವವರು, ರೌಡಿ ಶೀಟರ್ ನನ್ನ ಜೊತೆ ಇಲ್ಲ, ಎಲ್ಲದಕ್ಕೂ ನಾನೇ ಕಾರಣ ಎಂದರೆ ಮದ್ದಿಲ್ಲ ಎಂದು ತಿರುಗೇಟು ನೀಡಿದರು.

ನಗರಸಭೆ ಅಧ್ಯಕ್ಷ ಆರ್. ಮೋಹನ್, ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಶೋಭನ್ ಬಾಬು ಇದ್ದರು.



Join Whatsapp