ನವದೆಹಲಿ: ಜಾರಿ ನಿರ್ದೇಶನಾಲಯ ದಾಖಲಿಸಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ , ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ದೆಹಲಿ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದ್ದು ಇಂದು ಡಿಕೆಶಿ ಇಡಿ ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ.
ಇ.ಡಿ ಅವರನ್ನು ಬಂಧಿಸಿದ ಮೂರು ವರ್ಷಗಳ ನಂತರ, ಈ ವರ್ಷದ ಮೇ ತಿಂಗಳಲ್ಲಿ ಚಾರ್ಜ್ಶೀಟ್ ಸಲ್ಲಿಸಿತ್ತು.ಅದರ ಆಧಾರದ ಮೇಲೆ ನ್ಯಾಯಾಲಯವು ಜುಲೈ 1 ರಂದು ತನ್ನ ಮುಂದೆ ಹಾಜರಾಗುವಂತೆ ಪ್ರಕರಣದಲ್ಲಿ ಶಿವಕುಮಾರ್ ಗೆ ಸಮನ್ಸ್ ನೀಡಿದೆ. ಮನಿ ಲಾಂಡರಿಂಗ್ ತಡೆ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಾಸಿಕ್ಯೂಷನ್ನ ದೂರನ್ನು ದೆಹಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಇಡಿ ವಿಚಾರಣೆಯ ಸಂಬಂಧಿಸಿದಂತೆ ಈ ವಾರದ ಆರಂಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, ಮುಂದಿನ ವರ್ಷ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತಮ್ಮ ವಿರುದ್ಧ ಎಲ್ಲಾ ರಾಜಕೀಯ ಅಸ್ತ್ರಗಳನ್ನು ಬಳಸಲಾಗುತ್ತಿದೆ ಮತ್ತು ಅದೆಲ್ಲವನ್ನೂ ಎದುರಿಸಲು ತಾವು ಸಿದ್ಧ ಎಂದು ಹೇಳಿದ್ದರು.
ಶಿವಕುಮಾರ್, ನವದೆಹಲಿಯ ಕರ್ನಾಟಕ ಭವನದ ಉದ್ಯೋಗಿ ಆಂಜನೇಯ ಹನುಮಂತಯ್ಯ ಮತ್ತು ಆತನೊಂದಿಗೆ ನಂಟು ಹೊಂದಿರುವ ಇತರ ವ್ಯಕ್ತಿಗಳ ವಿರುದ್ಧ ಇ.ಡಿ 2018 ರ ಸೆಪ್ಟೆಂಬರ್ ನಲ್ಲಿ ಮನಿ ಲಾಂಡರಿಂಗ್ ಪ್ರಕರಣವನ್ನು ದಾಖಲಿಸಿತ್ತು. 60 ವರ್ಷದ ಶಿವಕುಮಾರ್ ಅವರನ್ನು 2019 ರಲ್ಲಿ ಇಡಿ ಹಲವು ಸುತ್ತಿನ ವಿಚಾರಣೆಯ ನಂತರ ಬಂಧನವನ್ನೂ ಮಾಡಿತ್ತು.