ಮಂಗಳೂರು: ಬೆಳ್ತಂಗಡಿಯ ಅಕ್ರಮ ಮರಳು ಮಾಫಿಯಾ ಸೇರಿದಂತೆ ಎಲ್ಲಾ ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತಿದ್ದ ದಕ್ಷ ಐಪಿಎಸ್ ಅಧಿಕಾರಿ ಬಂಟ್ವಾಳ ಎಎಸ್ ಪಿ ಶಿವಾಂಶು ರಜಪೂತ್ ಅವರನ್ನು ವರ್ಗಾವಣೆಗೊಳಿಸಿರುವುದು ಬೆಳ್ತಂಗಡಿ ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಿಜೆಪಿ ಮುಖಂಡರಾದ ಹರಿಕೃಷ್ಣ ಬಂಟ್ವಾಳ ಅವರ ಸಹೋದರ ನಡೆಸುತ್ತಿದ್ದ ಇಸ್ಪೀಟು ಅಡ್ಡೆ, ಹರೀಶ್ ಪೂಂಜಾ ಅವರ ಬೆಂಬಲಿಗರು ನಡೆಸುತ್ತಿದ್ದ ಅಕ್ರಮಗಳಿಗೆ ಕಡಿವಾಣ ಹಾಕಿದ್ದ ಕಾರಣಕ್ಕೆ ಶಿವಾಂಶು ಅವರನ್ನು ತಲೆದಂಡ ಮಾಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ. ವರ್ಗಾವಣೆಗೊಂಡ ಶಿವಾಂಶು ರಜಪೂತ್ ಅವರನ್ನು ಮರಳಿ ದಕ್ಷಿಣ ಕನ್ನಡ ಜಿಲ್ಲೆಗೆ ನಿಯೋಜನೆ ಮಾಡಬೇಕು ಎಂಬ ಕೂಗು ಜೋರಾಗುತ್ತಿದೆ.
ಜೂಜುಕೋರರು, ಮರಳು ದಂಧೆ ನಡೆಸುವವರ ಪಾಲಿನ ಸಿಂಹಸ್ವಪ್ನರಾಗಿ ಯಾವುದೇ ಅಪರಾಧ ಕಂಡರೂ ತಕ್ಷಣ ದಾಳಿ ನಡೆಸಿ ಅಪರಾಧಗಳನ್ನು ನಿಯಂತ್ರಣ ಮಾಡುತ್ತಿದ್ದ ಅವರ ಕರ್ತವ್ಯನಿಷ್ಠೆಗೆ ಜನ ಭೇಷ್ ಎನ್ನುತ್ತಿದ್ದರು. ಆದರೆ ಇಂತಹ ಜನಪರ ಎಎಸ್ ಪಿ ಅವರನ್ನು ದೂರದ ಹಮ್ನಾಬಾದ್ ಉಪವಿಭಾಗದ ಎ ಎಸ್ ಪಿ ಯಾಗಿ ವರ್ಗಾವಣೆ ಮಾಡಿದ ಸರಕಾರದ ಕ್ರಮಕ್ಕೆ ಬಂಟ್ವಾಳ ವಲಯದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಚ್ಚಿ ಹೋಗಿದ್ದ ಹಲವು ಅಪರಾಧ ಪ್ರಕರಣಗಳು ಬೆಳಕಿಗೆ ಬರುವ ಹೊತ್ತಿನಲ್ಲೇ ಎಸ್ ಎಸ್ ಪಿ ಶಿವಾಂಶು ರಜಪೂತ್ ಅವರನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ಸಮರ್ಥ ಐಪಿಎಸ್ ಅಧಿಕಾರಿಯನ್ನು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಓರ್ವ ಡಿವೈಎಸ್ ಪಿ ಯನ್ನು ನೇಮಕ ಮಾಡುವ ಅಗತ್ಯ ಏನಿತ್ತು ? ಎಂದು ನಾಗರಿಕರು ಪ್ರಶ್ನಿಸಿದ್ದಾರೆ.