ಮಂಗಳೂರು: ಮುಂಜಾನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಭಾರೀ ಮಳೆಗೆ ವ್ಯಕ್ತಿಯೋರ್ವ ತೋಡಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಕೊಲ್ನಾಡು ಕೆ.ಎಸ್.ರಾವ್ ನಗರದಲ್ಲಿ ನಡೆದಿದೆ.
ಸುನೀಲ್(46) ಮಳೆಗೆ ಕೊಚ್ಚಿ ಹೋದವರು ಎಂದು ತಿಳಿದುಬಂದಿದೆ.
ಈ ಘಟನೆ ನಿನ್ನೆ ರಾತ್ರಿ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಸ್ಥಳಕ್ಕೆ ಮುಲ್ಕಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಮಂಜನಾಡಿಯಲ್ಲಿ ಗುಡ್ಡ ಕುಸಿತ
ಕಳೆದ ರಾತ್ರಿಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಂಜನಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಸೈ ಕೆಳಗಿನಮನೆ ಎಂಬಲ್ಲಿ ಗುಡ್ಡ ಕುಸಿದ ಪರಿಣಾಮ ಮನೆ ಅಪಾಯಕ್ಕೆ ಸಿಲುಕಿದೆ.
ಕೊಟ್ಟಾರ ಚೌಕಿ ರಸ್ತೆ ಜಲಾವೃತ
ಮಂಗಳೂರಿನಲ್ಲಿ ನಗರದ ಪ್ರಮುಖ ರಾಜಕಾಲುವೆಗಳು ತುಂಬಿ ಹರಿಯುತ್ತಿವೆ. ಮಳೆ ಇದೇರೀತಿ ಇನ್ನೂ ಕೆಲ ಗಂಟೆಗಳ ಕಾಲ ಮುಂದುವರಿದಲ್ಲಿ ರಾಜಕಾಲುವೆಗಳ ಸುತ್ತಮುತ್ತ ತಗ್ಗು ಪ್ರದೇಶಗಳು ಜಲಾವೃತಗೊಳ್ಳುವ ಆತಂಕ ಎದುರಾಗಿದೆ.
ಕೊಟ್ಟಾರ ಚೌಕಿ ರಸ್ತೆಗೆ ರಾಜಕಾಲುವೆ ತುಂಬಿ ಹರಿದಿದ್ದು, ಈ ಪ್ರದೇಶದ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಜಲಾವೃತಗೊಂಡಿದೆ. ವಾಹನ ಸವಾರರು ಸಂಚಾರ ನಡೆಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಲವು ಕಡೆಗಳಲ್ಲಿ ಮನೆಗಳಿಗೂ ನೀರು ನುಗ್ಗಿದೆ.
ಕಣ್ಣೂರಿನ ಬೋರ್ ಗುಡ್ಡೆಯಲ್ಲೂ ಗುಡ್ಡೆ ಕುಸಿದಿದ್ದು, ಮನೆಯೊಣದಕ್ಕೆ ಹಾನಿಯಾಗಿದೆ.