ಮೆಟ್ರೋದಲ್ಲಿ ಸಾರ್ವಕರ್ ಕುರಿತ ಜಾಹೀರಾತು ತಕ್ಷಣ ತೆರವುಗೊಳಿಸಿ: ರಮೇಶ್ ಬಾಬು

Prasthutha|

►40% ಕಮಿಷನ್ ಪ್ರಕರಣದ ಬಗ್ಗೆ ಗೃಹ ಇಲಾಖೆ ತನಿಖೆ ಹಿಂದೆ ಷಡ್ಯಂತ್ರ

- Advertisement -

ಬೆಂಗಳೂರು: ಮೆಟ್ರೋ ರೈಲುಗಳಲ್ಲಿ ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ಪ್ರಯಾಣ ಮಾಡುವ ಅವಧಿಯಲ್ಲಿ ಸಾರ್ವಕರ್ ಅವರ ವಿಚಾರದ ಬಗ್ಗೆ ಜಾಹೀರಾತು ನೀಡಲಾಗುತ್ತಿದೆ. ಕೂಡಲೆ ಇದನ್ನು ತೆರವುಗೊಳಿಸಿ ರಾಷ್ಟ್ರ ನಾಯಕರ ಭಾವಚಿತ್ರ ಅಳವಡಿಸಬೇಕು ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಈ ವಿಚಾರವಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,  ಈ ಹಿಂದೆ ಮೆಟ್ರೋದವರು ನಾಮಫಲಕದಲ್ಲಿ ಹಿಂದಿ ಹೇರಿಕೆ ಮಾಡಲು ಮುಂದಾದಾಗ ಕನ್ನಡಿಗರು ಹೋರಾಟದ ನಂತರ ಕನ್ನಡ ಅಳವಡಿಸಿದ್ದರು. ಈಗ ಮತ್ತೆ ಅದೇ ರೀತಿಯ ಸಂಘರ್ಷಕ್ಕೆ ಅವಕಾಶ ಮಾಡಿಕೊಡಬಾರದು. ರಾಷ್ಟ್ರಪಿತ ಮಹಾತ್ಮ ಗಾಂಧಿಜಿ, ದೇಶದ ಮೊದಲ ಪ್ರಧಾನಿ ನೆಹರೂ, ದೇಶದ ಮೊದಲ ರಾಷ್ಟ್ರಪತಿ, ಅಂಬೇಡ್ಕರ್, ಬಸವಣ್ಣನವರ ವಿಚಾರವನ್ನು ತಿಳಿಸದೇ ಸಾರ್ವಕರ್ ಅವರ ಕುರಿತು ಜಾಹೀರಾತು ನೀಡುತ್ತಿರುವುದು ಸರಿಯಲ್ಲ, ಈ ಜಾಹೀರಾತು ನೀಡಿದವರು ಯಾರು ಎಂದು ನಮ್ಮ ಗಮನಕ್ಕೆ ಬಂದಿಲ್ಲ. ಕೂಡಲೇ ಮೆಟ್ರೋ ಅಧಿಕಾರಿಗಳು ಈ ಜಾಹೀರಾತನ್ನು ತೆಗೆಯಬೇಕು ಎಂದು  ಆಗ್ರಹಿಸಿದರು.

- Advertisement -

 ‘ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ 40% ಕಮಿಷನ್ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಇಲಾಖೆ ಅಧಿಕಾರಿಗಳ ತನಿಖೆ ಹಿಂದೆ ಷಡ್ಯಂತ್ರವಿದೆ. ಗೃಹ ಇಲಾಖೆ ಅಧಿಕಾರಿಗಳ ನಡೆ ದೂರು ನೀಡಿರುವ ಗುತ್ತಿಗೆದಾರರ ಸಂಘವನ್ನು ಬೆದರಿಸುವ ಹಾಗೂ ಭ್ರಷ್ಟ ಸಚಿವರನ್ನು ರಕ್ಷಣೆ ಮಾಡುವ ಪ್ರಯತ್ನ ನಡೆಯುತ್ತಿವೆ ಎಂಬುದು ಸ್ಪಷ್ಟಪಡಿಸುತ್ತಿವೆ’ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಆರೋಪಿಸಿದ್ದಾರೆ.

40% ಕಮಿಷನ್ ವಿಚಾರವಾಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ಪತ್ರ ಬರೆದು ಸುಮಾರು ಒಂದು ವರ್ಷ ಪೂರ್ಣಗೊಂಡಿದ್ದು, ಈಗ ಅದರ ವಿಚಾರಣೆಗೆ ಮುಂದಾಗಿದ್ದಾರೆ. ಈ ಪ್ರಕರಣದ ವಿಚಾರಣೆ ಮಾಡಲು ಬಂದ ಅಧಿಕಾರಿಗಳು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಿಗೆ ದಾಖಲೆ ಸಲ್ಲಿಸುವಂತೆ ಕೇವಲ ಮೌಖಿಕ ರೂಪದಲ್ಲಿ ಸೂಚನೆ ನೀಡಿರುವುದು ಏಕೆ? ಲಿಖಿತ ರೂಪದಲ್ಲಿ ನೊಟೀಸ್ ಅನ್ನು ನೀಡಿಲ್ಲ ಏಕೆ? ಕೆಂಪಣ್ಣನವರು ದೂರು ನೀಡಿದ್ದು, ಪ್ರಧಾನಿ ಕಾರ್ಯಾಲಯಕ್ಕೆ, ಆದರೆ ಗೃಹ ಇಲಾಖೆ ತನಿಖೆಗೆ ಮುಂದಾಗಿದೆ. ಪ್ರಧಾನಿ ಕಾರ್ಯಾಲಯದಿಂದ ತನಿಖೆ ನಡೆಸುವಂತೆ ಗೃಹ ಸಚಿವಾಲಯಕ್ಕೆ ಸೂಚನೆ ರವಾನೆಯಾಗಿದೆಯೇ? ಈ ಬಗ್ಗೆ ಪ್ರಧಾನಿ ಕಾರ್ಯಾಲಯವಾಗಲಿ, ಗೃಹ ಇಲಾಖೆಯಾಗಲಿ ಯಾಕೆ ಸ್ಪಷ್ಟನೆ ನೀಡಿಲ್ಲ? ಎಂದು ಅವರು ಪ್ರಶ್ನಿಸಿದರು.

ಗೃಹ ಸಚಿವಾಲಯದ ಅಧಿಕಾರಿಗಳು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರನ್ನು ಸಂಪರ್ಕಿಸಿ ಈ ಪ್ರಕರಣದ ಮಾಹಿತಿ ಕೋರಿದ್ದಾರೆ ಎಂದು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದ ನಂತರ, ಗೃಹ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ವಿಚಾರ ತಿಳಿದಿದೆ ನಾವು ಮತ್ತೆ ಬರುವುದಾಗಿ ಹೇಳಿ ಹೊರಟಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಗೃಹ ಇಲಾಖೆ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಯದಂತೆ ಈ ಪ್ರಕರಣದ ಸಾಕ್ಷ್ಯಗಳನ್ನು ಕಲೆಹಾಕಲು ಪ್ರಯತ್ನಿಸಿದ್ದು ಯಾಕೆ? ಎಂದು ಬಾಬು ಪ್ರಶ್ನಿಸಿದರು.

ಕೇಂದ್ರದ ಯಾವುದೇ ಇಲಾಖೆ ರಾಜ್ಯದ ಪ್ರಕರಣದಲ್ಲಿ ತನಿಖೆ ಮಾಡಬೇಕಾದರೆ, ಅಥವಾ ಮಾಹಿತಿ ಪಡೆಯಬೇಕಾದರೆ ಲಿಖಿತ ರೂಪದಲ್ಲಿ ನೋಟೀಸ್ ನೀಡಬೇಕು. ಆದರೆ ಸಂಘಕ್ಕೆ ಲಿಖಿತ ರೂಪದಲ್ಲಿ ನೊಟೀಸ್ ಯಾಕೆ ನೀಡಿಲ್ಲ? ಪ್ರಧಾನಮಂತ್ರಿಗಳ ಕಾರ್ಯಾಲಯಕ್ಕೆ ದೂರು ಸಲ್ಲಿಸಿದ್ದು, ಗುತ್ತಿಗೆದಾರರ ಸಂಘಕ್ಕೆ ಪ್ರಧಾನಿ ಕಾರ್ಯಾಲಯದಿಂದ ಯಾವುದೇ ಸೂಚನೆ ಬಂದಿಲ್ಲ. ಗುತ್ತಿಗೆದಾರರ ಸಂಘವನ್ನು ಹೆದರಿಲು ಪ್ರಯತ್ನಿಸುತ್ತಿದೆಯೇ ಅಥವಾ ಬೇರೆ ಯಾವುದಾದರು ಸಂದೇಶವನ್ನು ರವಾನಿಸಲು ಗೃಹ ಇಲಾಖೆ ಪ್ರಯತ್ನಿಸುತ್ತಿದೆಯೇ ಎಂಬುದನ್ನು ಗೃಹ ಇಲಾಖೆಯ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.

ಗೃಹ ಇಲಾಖೆ ಅಡಿಯಲ್ಲಿ ಬರುವ ಸಿಬಿಐ, ಇಡಿ ಅಥವಾ ಇತರೆ ತನಿಖಾ ಸಂಸ್ಥೆಗಳನ್ನು ರಾಜಕೀಯ ಕಾರಣಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಅದರ ಮುಂದುವರಿದ ಭಾಗವಾಗಿ ಇಂದು ಗುತ್ತಿಗೆದಾರರ ಸಂಘಕ್ಕೆ ಮೌಖಿಕವಾಗಿ ಸೂಚನೆ ನೀಡಿ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಂತರ ಮಾಧ್ಯಮಗಳಿಗೆ ಹೆದರಿ ಪಲಾಯನ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

ಪ್ರಧಾನಮಂತ್ರಿಗಳು ಬೆಂಗಳೂರು ಹಾಗೂ ಮೈಸೂರು ಕಾರ್ಯಕ್ರಮಗಳಿಗಾಗಿ ರಾಜ್ಯ ಪ್ರವಾಸ ಕೈಗೊಂಡಿದ್ದರು. ಬೆಂಗಳೂರಿನಲ್ಲಿ ಅವರ ಭೇಟಿಗೆ ನಗರ ಶೃಂಗಾರಕ್ಕೆ 24 ಕೋಟಿ ವೆಚ್ಚ ಮಾಡಲಾಗಿದೆ ಎಂದು ರಾಜ್ಯ ಸರ್ಕಾರವೇ ಮಾಹಿತಿ ನೀಡಿದೆ. ಒಬ್ಬ ಗುತ್ತಿಗೆದಾರರಿಗೆ 11.5 ಕೋಟಿ ಪಾವತಿಸಿ ಕಳಪೆ ಕಾಮಗಾರಿ ನಡೆದಿದೆ. ಈ ವಿಚಾರವಾಗಿ ಪ್ರಧಾನಿ ಕಾರ್ಯಾಲಯ ಸ್ಪಷ್ಟನೆ ಕೇಳಿದ ನಂತರ ಅವರಿಗೆ 3 ಲಕ್ಷ ದಂಡವನ್ನು ವಿಧಿಸಿ ಪ್ರಕರಣ ಮುಚ್ಚಿಹಾಕಲು ಪ್ರಯತ್ನಿಸಿದ್ದಾರೆ. 11.5 ಕೋಟಿ ಬಿಲ್ ಪಾವತಿ ಮಾಡಿ, ಇವರೇ ಕಳಪೆ ಕಾಮಗಾರಿ ಎಂದು ಕೇವಲ 3 ಲಕ್ಷ ದಂಡ ಹಾಕಲಾಗಿದೆ. ಇದರಲ್ಲಿ ಯಾರೆಲ್ಲಾ ಭಾಗಿಯಾಗಿದ್ದಾರೆ? ಬೆಂಗಳೂರಿನ ಸಂಪುಟ ಸಚಿವರೇ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಒಪ್ಪಿಕೊಳ್ಳಲು ಈ ಸರ್ಕಾರಕ್ಕೆ ಯಾಕೆ ಶಕ್ತಿ ಇಲ್ಲ? ಈ ಸಚಿವರು ಬೇನಾಮಿ ಹೆಸರಲ್ಲಿ ಕಾಮಗಾರಿ ಮಾಡಿದ್ದಾರೆ ಎಂದು ಹೇಳುವ ತಾಕತ್ತು ಮುಖ್ಯಮಂತ್ರಿಗಳಿಗಿಲ್ಲವೇ? 40% ಕಮಿಷನ್ ಆರೋಪಕ್ಕೆ ಪೂರಕವಾಗಿ ಈ ಕಳಪೆ ಕಾಮಗಾರಿ ನಡೆದಿದೆ.  ಗುತ್ತಿಗೆದಾರರ ಸಂಘದ ದೂರಿನ ನಂತರ ಈ ಸಂಘ ಹಾಗೂ ಅದರ ಪದಾಧಿಕಾರಿಗಳನ್ನು ಹಣಿಯುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ. ಇವರಿಗೆ ಗುತ್ತಿಗೆ ಸಿಗದಂತೆ ತಪ್ಪಿಸುವುದು, ಗುತ್ತಿಗೆದಾರರಿಗೆ ಬಿಲ್ ತಡೆಹಿಡಿದು, ಪರೋಕ್ಷವಾಗಿ ಗುತ್ತಿಗೆದಾರರ ಸಂಘದವನ್ನು ಹೆದರಿಸುವ ಪ್ರಯತ್ನ ಮಾಡಲಾಗುತ್ತಿದೆ. ಇನ್ನು ಗುತ್ತಿಗೆದಾರರ ಸಂಘ ಮಾಡಿದ ಆರೋಪದ ಪೈಕಿ, ಕೆಆರ್ ಡಿಎಲ್ ಸಂಸ್ಥೆ ಮೂಲಕ ರಾಜ್ಯದ ನಿರ್ಮಿತಿ ಕೇಂದ್ರದ ಮೂಲಕ ಸ್ಥಳಈಯ ಶಆಸಕರು ಟೆಂಡರ್ ರಹಿತವಾಗಿ ಕಾಮಗಾರಿಗಳನ್ನು ತಮ್ಮ ಬಂಧುಗಳು ಹಾಗೂ ಬೇನಾಮಿ ಹೆಸರಲ್ಲಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆದರೂ ಇದ್ಯಾವುದರ ಮೇಲೆ ಒಂದೇಒಂದು ಪ್ರಕರಣದ ತನಿಖೆಯಾಗಿಲ್ಲ ಎಂದು ರಮೇಶ್ ಬಾಬು ಆರೋಪಿಸಿದರು.

 . ಈ ಸಂದರ್ಭದಲ್ಲಿ ಕಾನೂನು ವಿಭಾಗದ ಉಪಾಧ್ಯಕ್ಷರಾದ ದಿವಾಕರ್, ಮಾಧ್ಯಮ ವಿಭಾಗದ ಸಂಯೋಜಕರಾದ ರಾಮಚಂದ್ರಪ್ಪ, ಜಿ.ಸಿ ರಾಜುಗೌಡ ಅವರು ಉಪಸ್ಥಿತರಿದ್ದರು.



Join Whatsapp