ಬೆಂಗಳೂರು: ಗುಜರಾತ್ ವಂಶ ಹತ್ಯೆಯ ಸಂತ್ರಸ್ತರ ಪರವಾಗಿ ಕಾನೂನು ಹೋರಾಟದಲ್ಲಿ ನಿರತರಾದ ಸಾಮಾಜಿಕ ಕಾರ್ಯಕರ್ತರಾದ ತೀಸ್ತಾ ಸೆಟಲ್ವಾಡ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಶ್ರೀಕುಮಾರ್ ಅವರನ್ನು ಸುಳ್ಳು ಮಾಹಿತಿ ಮತ್ತು ಪಿತೂರಿಯ ಆರೋಪದ ಮೇಲೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ (ATS) ಪೊಲೀಸರು ಬಂಧಿಸಿರುವುದನ್ನು ನ್ಯಾಷನಲ್ ವಿಮೆನ್ಸ್ ಫ್ರಂಟ್ ತೀವ್ರವಾಗಿ ಖಂಡಿಸಿದೆ.
ಭಾರತ ದೇಶವು ತಲುಪಿದ ದುಸ್ಥಿತಿಗೆ ಹಿಡಿದ ಕೈಗನ್ನಡಿ ಎಂಬಂತೆ ಗುಜರಾತ್ ಕೋಮುಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರನ್ನು ಆರೋಪಮುಕ್ತಗೊಳಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇದಲ್ಲದೆ ಸರಿಸುಮಾರು 2,000 ದಷ್ಟು ಜನರ ಮಾರಣಹೋಮಕ್ಕೆ ಕಾರಣವಾದ ವಂಶ ಹತ್ಯೆಯನ್ನು ನಡೆಸಲು ಪಿತೂರಿ ನಡೆಸಿದವರ ಮೇಲೆ ಹೊರಿಸಲಾದ ಆರೋಪಗಳಿಗೆ ಯಾವುದೇ ಸಾಕ್ಷಿಗಳಿಲ್ಲ ವೆಂದೂ ಬದಲಾಗಿ ಗುಜರಾತ್ ವಂಶ ಹತ್ಯೆಯ ಸಂತ್ರಸ್ತರ ಪರವಾಗಿ ಕಾನೂನು ಹೋರಾಟದಲ್ಲಿ ನಿರತರಾದ ಸಾಮಾಜಿಕ ಹೋರಾಟಗಾರರಾದ ತೀಸ್ತಾ ಸೆಟಲ್ವಾಡ್ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಶ್ರೀಕುಮಾರ್ ಅವರನ್ನೇ ಸುಳ್ಳು ಮಾಹಿತಿ ಮತ್ತು ಪಿತೂರಿಯ ಆರೋಪದ ಮೇಲೆ ಗುಜರಾತ್ ಭಯೋತ್ಪಾದನಾ ನಿಗ್ರಹ ದಳದ(ATS) ಪೊಲೀಸರು ಬಂಧಿಸಿದ್ದಾರೆ. ಅವರ ಮೇಲೆ ಸೆಕ್ಷನ್ 471, 194, ಸೆಕ್ಷನ್ 211, 120ಬಿ ಮುಂತಾದ ಗಂಭೀರ ಕ್ರಿಮಿನಲ್ ಆರೋಪಗಳನ್ನು ಹೊರಿಸಿರುವುದು ನ್ಯಾಯದ ನಿರೀಕ್ಷೆಯಲ್ಲಿರುವ ಮತ್ತು ನ್ಯಾಯಕ್ಕಾಗಿ ಕಾನೂನು ಹೋರಾಟ ಮಾಡುವ ಜನರಿಗೆ ಒಡ್ಡಿರುವ ಬಹಿರಂಗ ಬೆದರಿಕೆಯಲ್ಲದೆ ಬೇರೇನೂ ಅಲ್ಲ. ಇದನ್ನು NWF ಶಕ್ತವಾಗಿ ಖಂಡಿಸುತ್ತದೆ ಎಂದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಫಾಶಿಸ್ಟ್ ಸಂಘಪರಿವಾರವು ದೇಶದ ಎಲ್ಲಾ ವ್ಯವಸ್ಥೆಗಳನ್ನು ಆಪೋಶನ ತೆಗೆದುಕೊಂಡಿದ್ದು ನ್ಯಾಯಾಲಯವು ಅದಕ್ಕೆ ಇತ್ತೀಚಿನ ಸೇರ್ಪಡೆಯಾಗಿರುವುದು ಭಾರತದ ಪ್ರಜಾಪ್ರಭುತ್ವದ ಘೋರ ದುರಂತ. ಗುಜರಾತಿನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಕುಟುಂಬವನ್ನು ಹಾಡಹಗಲೇ ಜೀವಂತವಾಗಿ ಸುಟ್ಟ ಪ್ರಕರಣದಲ್ಲಿ ಸಂತ್ರಸ್ತರ ಬೆನ್ನಿಗೆ ನಿಂತ ತೀಸ್ತಾ ಸೆಟಲ್ವಾಡ್ ರವರ ಬಂಧನವು ಭಾರತದ ಸಂವಿಧಾನದ ಬಂಧನಕ್ಕೆ ಸರಿಸಮಾನ. ಅವರು ಮಾಡಿದ ಆರೋಪಗಳು ಸುಳ್ಳಾಗಿದ್ದರೆ ಅಂದು ಗುಜರಾತಿನಾದ್ಯಂತ 2000 ಜನರ ಹತ್ಯೆ ಹೇಗೆ ಆಯಿತು, ಲಕ್ಷಗಟ್ಟಲೆ ಜನರ ಅಪಾರ ಆಸ್ತಿಪಾಸ್ತಿಗಳನ್ನು ಯಾರು ಲೂಟಿ ಮಾಡಿ ದ್ವಂಸ ಮಾಡಿದರು. ಬೆಸ್ಟ್ ಬೇಕರಿ, ನರೋಡಾ ಪಾಟಿಯ, ಗುಲ್ಬರ್ಗ ಸೊಸೈಟಿ ಗುಜರಾತಿನಾದ್ಯಂತ ಜನರು ಕ್ರೂರವಾಗಿ ಮರ್ದಿಸಲ್ಪಟ್ಟದ್ದು, ಗರ್ಭಿಣಿಯರು ಸೇರಿ ಮಹಿಳೆಯರು ಅತ್ಯಾಚಾರಗೊಳ ಪಟ್ಟದ್ದು, ಹೊಟ್ಟೆ ಒಳಗಿನ ಭ್ರೂಣವನ್ನೂ ಬಿಡದೆ ಹತ್ಯೆಗೈದಿರುವವರು ಯಾರು? ನ್ಯಾಯಾಲಯವು ಇದನ್ನು ಉತ್ತರಿಸಿದ್ದರೆ ಒಳ್ಳೆಯದಿತ್ತು. ಫಾಶಿಸಂನ ಬಲೆಗೆ ನ್ಯಾಯಾಲಯವೂ ಬಿದ್ದು ತನ್ನ ತಕ್ಕಡಿಯಲ್ಲಿ ಅನ್ಯಾಯವನ್ನೇ ವಿತರಿಸ ತೊಡಗಿದಾಗ ಮಾತ್ರ ಇಂತಹ ಬಂಧನಗಳು ಸಾಧ್ಯ. ಈ ದೇಶದ ಜನರು ನ್ಯಾಯಾಲಯದ ಮೇಲೆ ಇಟ್ಟ ಭರವಸೆಯ ಕಿರಣಗಳು ವಾಸಿಯಾಗಬೇಕಾದರೆ ಈ ಕೂಡಲೇ ತೀಸ್ತಾ ಸೆಟಲ್ವಾಡ್ ರವರನ್ನು ಮತ್ತು ಮಾಜಿ ಐಪಿಎಸ್ ಅಧಿಕಾರಿ ಶ್ರೀಕುಮಾರ್ ರವರನ್ನು ನಿಶ್ಶರ್ತವಾಗಿ ಬಿಡುಗಡೆ ಮಾಡಬೇಕೆಂದು NWF ಶಕ್ತವಾಗಿ ಆಗ್ರಹಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.