ಭೂಮಿಯ ಹಕ್ಕನ್ನು ದಲಿತರಿಗೆ ಮೊದಲು ನೀಡಿದ್ದೇ ಟಿಪ್ಪು ಸುಲ್ತಾನ್: ಬಸವಲಿಂಗ ಸ್ವಾಮೀಜಿ

Prasthutha|

ಮೈಸೂರು: ಟಿಪ್ಪು ಸುಲ್ತಾನ್‌ ಕರ್ನಾಟಕ ರಾಜ್ಯವಷ್ಟೇ ಅಲ್ಲದೇ  ಆಳ್ವಿಕೆ ನಡೆಸಿದ ಕೇರಳ, ತಮಿಳುನಾಡು, ಆಂಧ್ರದಲ್ಲಿ ಎಲ್ಲಾ ದಲಿತರು ಭೂಮಿಯ ಮಾಲೀಕತ್ವವನ್ನು ಪಡೆಯುವಂತೆ ಮಾಡಿದ್ದರು. ಅಲ್ಲದೆ ಭೂಮಿಯ ಹಕ್ಕನ್ನು ದಲಿತರಿಗೆ ಮೊದಲು ನೀಡಿದ್ದೇ ಟಿಪ್ಪು  ಎಂದು ಬಸವಲಿಂಗ ಸ್ವಾಮೀಜಿ ಹೇಳಿದ್ದಾರೆ.

- Advertisement -

ಹಜ್ರತ್‌ ಟಿಪ್ಪು ಸುಲ್ತಾನ್‌ ಶಹೀದ್ ವೆಲ್‌ಫೇರ್ ಮತ್ತು ಉರೂಸ್‌ ಸಮಿತಿ ವತಿಯಿಂದ  ಅಶೋಕರಸ್ತೆಯ ಮಿಲಾದ್‌ ಭಾಗ್‌ನಲ್ಲಿ  ಆಯೋಜಿಸಲಾಗಿದ್ದ ಟಿಪ್ಪು ಸುಲ್ತಾನ್‌ 230ನೇ ಗಂಧ ಉರೂಸ್‌ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟಿಪ್ಪು ಕರ್ನಾಟಕದ ಕೀರ್ತಿಯನ್ನು ಬೆಳಗಿದವರು. ನಂಜನಗೂಡಿಗೆ ಶ್ರೀಕಂಠೇಶ್ವರ ದೇಗುಲಕ್ಕೆ ಪಚ್ಚೆ ಲಿಂಗ ನೀಡಿದ್ದರು. ಶೃಂಗೇರಿಯನ್ನು ಮರಾಠರು ಲೂಟಿ ಮಾಡಿದಾಗ, ಅಲ್ಲಿನ ಸ್ವಾಮೀಜಿಗೆ ರಕ್ಷಣೆ ಕೊಟ್ಟದ್ದಲ್ಲದೆ, ಧನ ಕನಕ ಕೊಟ್ಟಿದ್ದರು. ಸೌಹಾರ್ದ ‍ಪರಂಪರೆಯನ್ನು ಕಟ್ಟಿದ ಅವರನ್ನು ಕನ್ನಡಿಗರು ನಿತ್ಯ ಸ್ಮರಿಸಬೇಕು’ ಎಂದು ಹೇಳಿದರು.

‘ಟಿಪ್ಪು ಕನ್ನಡ ವಿರೋಧಿಯಲ್ಲ. ಶೃಂಗೇರಿ ಮಠದೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಿದ್ದ ‍ಪತ್ರಗಳು ಲಭ್ಯವಿವೆ. ಅವುಗಳನ್ನು ಓದಿದರೆ ಟಿಪ್ಪು ಕನ್ನಡದ ಸುಪುತ್ರ ಎಂಬುದು ಅರಿವಾಗುತ್ತದೆ. ಅಬ್ದುಲ್‌ ಕಲಾಂ ಅವರು ತಮ್ಮ ಪುಸ್ತಕಗಳಲ್ಲಿ ಟಿಪ್ಪು ಹಾಗೂ ರಾಕೆಟ್‌ ತಂತ್ರಜ್ಞಾನವನ್ನು ಕೊಂಡಾಡಿದ್ದಾರೆ’ ಎಂದರು.

- Advertisement -

ಸಣ್ಣ ಸಂಸ್ಥಾನವಾಗಿದ್ದ ಮೈಸೂರನ್ನು ವಿಸ್ತರಿಸಿದ ಟಿಪ್ಪು, ಕೃಷ್ಣಾ ನದಿಯಿಂದ ತಮಿಳುನಾಡಿನ ದಿಂಡಿಗಲ್‌ವರೆಗೆ ಸಾಮ್ರಾಜ್ಯ ಹರಡಿದರು. ಮೈಸೂರು ಅರಸರ ಗೌರವಕ್ಕೆ ಅವರೆಂದೂ ಚ್ಯುತಿ ತರಲಿಲ್ಲ. ಆದರೆ, ಕೆಲ ಮೂರ್ಖರು ಅಜ್ಞಾನದಿಂದ ವಿರೋಧಿಸುತ್ತಿದ್ದಾರೆ. ಸರಿಯಾಗಿ ಇತಿಹಾಸ ಓದಿಕೊಳ್ಳಬೇಕು’ ಎಂದು ಸ್ವಾಮೀಜಿ ಹೇಳಿದ್ದಾರೆ.



Join Whatsapp