ಶಿರಾಡಿ ಘಾಟ್ ಬಂದ್ ಇಲ್ಲ, ಕೋರಿಕೆ ಬಂದ ನಂತರ ತೀರ್ಮಾನ: ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್

Prasthutha|

ಹಾಸನ: ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75 ನ್ನು ಬಂದ್ ಮಾಡುವ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದರು.

- Advertisement -


ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿಗೆ ಸಂಬಂಧಿಸಿದಂತೆ ಕಳೆದ ಶುಕ್ರವಾರ ಮಂಗಳೂರು ಡಿಸಿ ಅವರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮಾಡಿದ್ದೇವೆ. ಎನ್ ಹೆಚ್ ಎಐ ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಿದ್ದೇವೆ. ಮಲೆನಾಡು ಭಾಗದಲ್ಲಿ ಮಳೆ ಜೋರಾಗಿರುವುದರಿಂದ ಯಾವುದೇ ರೀತಿಯಲ್ಲೂ ಪೂರ್ಣ ಪ್ರಮಾಣದ ಕಾಮಗಾರಿ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ ಎಂದರು.
ಹಾಗೆಯೇ ಎನ್ ಹೆಚ್ ಎಐ ನಿಂದ ಹೆದ್ದಾರಿ ಬಂದ್ ಮಾಡುವ ಬಗ್ಗೆ ನಮಗೆ ಯಾವುದೇ ಪ್ರಸ್ತಾವನೆ ಬಂದಿಲ್ಲ. ಹೀಗಾಗಿ ರಸ್ತೆ ಮುಚ್ಚುವ ಯಾವುದೇ ನಿರ್ಧಾರ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದರು.


ಒಂದು ವೇಳೆ ಹೆದ್ದಾರಿ ಬಂದ್ ಮಾಡಲು ಸಂಬಂಧಪಟ್ಟವರಿಂದ ಕೋರಿಕೆ ಬಂದರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮಂಗಳೂರು ಡಿಸಿ ಅವರ ಗಮನಕ್ಕೆ ತಂದು ಅಂತಿಮ ನಿರ್ಧಾರ ಮಾಡಲಾಗುವುದು ಎಂದರು.
ಸಕಲೇಶಪುರದಿಂದ ಮಾರನಹಳ್ಳಿವರೆಗಿನ ಸುಮಾರು 10 ಕಿಮೀ ರಸ್ತೆ ಅತ್ಯಂತ ದುಃಸ್ಥಿತಿಯಲ್ಲಿರುವುದರಿಂದ ಅಗತ್ಯ ಬಿದ್ದಲ್ಲಿ ಅದನ್ನು ಪ್ರತಿದಿನವೂ ನಿರ್ವಹಣೆ ಮಾಡಬೇಕು. ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವಾಹನ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗುತ್ತಿಗೆದಾರರಿಗೆ ಸೂಚನೆ ಕೊಟ್ಟಿದ್ದೇನೆ ಎಂದು ತಿಳಿಸಿದರು.

- Advertisement -


ಜೋರು ಮಳೆಯಿಂದ ಸಕಲೇಶಪುರದಿಂದ ಆ ಕಡೆಗೆ ನಿಗದಿತ ಕಾಮಗಾರಿ ಮಾಡಲಾಗುತ್ತಿಲ್ಲ. ಕೇವಲ ನಿರ್ವಹಣೆ ಮಾಡುತ್ತಿದ್ದಾರೆ ಅಷ್ಟೆ. ಹಾಸನ ಕಡೆಯಿಂದ ಕಾಮಗಾರಿ ನಡೆಯುತ್ತಿದ್ದು, ಬಾಳ್ಳುಪೇಟೆ, ಬಾಗೆ ಭಾಗದಲ್ಲೂ ಹಿನ್ನಡೆಯಾಗಿದೆ ಎಂದು ಮಾಹಿತಿ ನೀಡಿದರು.



Join Whatsapp