ಬೆಂಗಳೂರು: ರಸ್ತೆಯಲ್ಲಿ ಎಲ್ಲೆಂದರಲ್ಲಿ ವಾಹನ ತಡೆದು ಸಂಚಾರ ಪೊಲೀಸರು ಪರಿಶೀಲನೆ ನಡೆಸುವ ನೆಪದಲ್ಲಿ ಉಂಟು ಮಾಡುವ ಕಿರಿಕಿರಿಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿಪಿ) ಪ್ರವೀಣ್ ಸೂದ್ ಬ್ರೇಕ್ ಹಾಕಿದ್ದಾರೆ.
ನಗರದಲ್ಲಿ ಬೇಕಾಬಿಟ್ಟಿ ವಾಹನಗಳನ್ನು ತಡೆದು ಸಂಚಾರ ಪೊಲೀಸರು ನಿಲ್ಲಿಸುವಂತಿಲ್ಲ. ಸಿಕ್ಕಸಿಕ್ಕಲ್ಲಿ ಬೈಕ್, ಕಾರುಗಳನ್ನು ಪಕ್ಕಕ್ಕೆ ಹಾಕಿ ಎಂದು ಸವಾರರು ಚಾಲಕರಿಗೆ ಟ್ರಾಫಿಕ್ ಪೊಲೀಸರು ಹೇಳುವಂತಿಲ್ಲ.
ಪಾನಮತ್ತ ( ʻಡ್ರಿಂಕ್ & ಡ್ರೈವ್) ಮಾಡುವ ವಾಹನಗಳಿಗೆ ಮಾತ್ರ ತಪಾಸಣೆ ಮಾಡಬೇಕು. ಜತೆಗೆ ಸಂಚಾರ ನಿಯಮ ಉಲ್ಲಂಘನೆ ಮಾಡುವ ವಾಹನಗಳ ಮೇಲೆ ಹೆಚ್ಚಿನ ನಿಗಾ ವಹಿಸಿ ಎಂದು ಸಂಚಾರ ಪೊಲೀಸರಿಗೆ ಟ್ಟಿಟ್ಟರ್ ನಲ್ಲಿ ಡಿಜಿ ಪ್ರವೀಣ್ ಸೂದ್ ಸೂಚನೆ ನೀಡಿದ್ದಾರೆ.
ನಗರದ ಪೊಲೀಸ್ ಕಮೀಷನರ್ ಹಾಗೂ ಸಂಚಾರ ಜಂಟಿ ಆಯುಕ್ತರನ್ನು ಟ್ಯಾಗ್ ಮಾಡಿ ಪ್ರವೀಣ್ ಸೂದ್ ಅವರು ಟ್ವಿಟ್ ಮಾಡಿದ್ದಾರೆ.
ನಗರದ ಎಲ್ಲೆಂದರಲ್ಲಿ ವಾಹನಗಳ ತಡೆದು ತಪಾಸಣೆ ಮಾಡುವುದರಿಂದ ಸಂಚಾರ ದಟ್ಟಣೆ ಜೊತೆಗೆ ಅನಗತ್ಯ ಕಿರಿಕಿರಿ ಜಗಳ ಉಂಟಾಗುವ ಬಗ್ಗೆ ಸಾರ್ವಜನಿಕರಿಂದ ಬರುತ್ತಿದ್ದ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರವೀಣ್ ಸೂದ್ ಇಂತಹ ತೀರ್ಮಾನ ಕೈಗೊಂಡಿದ್ದಾರೆ.