ಬೆಂಗಳೂರು: ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ನಡೆಸಿದ ಪರಿಷ್ಕರಣೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ತಿದ್ದುಪಡಿ ಮಾಡುವಂತೆ ಮತ್ತು ಬಿಟ್ಟು ಹೋದ ಅಂಶಗಳನ್ನು ಸೇರಿಸಿ ಪುಸ್ತಕ ವಿತರಿಸಲು ಆದೇಶ ಹೊರಡಿಸಿದೆ.
1ರಿಂದ 10ನೇ ತರಗತಿಯ ಕನ್ನಡ ಭಾಷಾ ವಿಷಯಗಳು, ಪರಿಸರ ಅಧ್ಯಯನ ಹಾಗೂ 6ರಿಂದ 10ನೆ ತರಗತಿಯ ಸಮಾಜ ವಿಜ್ಞಾನ ವಿಷಯಗಳ ಪರಿಷ್ಕೃತ ಪಠ್ಯಪುಸ್ತಕಗಳನ್ನು ಮಾರ್ಪಡಿಸಿ 2022-23ನೇ ಸಾಲಿಗೆ ಅಳವಡಿಸಿ ತಿದ್ದೋಲೆ ಹೊರಡಿಸಲು ಆದೇಶ ನೀಡಲಾಗಿದೆ.
9ನೇ ತರಗತಿ ಸಮಾಜ ವಿಜ್ಞಾನ ಭಾಗ-01ರ ನಮ್ಮ ಸಂವಿಧಾನ ಎಂಬ ಪಾಠದಲ್ಲಿ ಸಂವಿಧಾನದ ಕರಡು ರಚನೆ ಸಮಿತಿ ಬಗ್ಗೆ ಉಲ್ಲೇಖವಿರುತ್ತದೆ. ಅದರಲ್ಲಿ ಪರಿಷ್ಕೃತ ಪಠ್ಯದಲ್ಲಿ ಇವರು ಸಂವಿಧಾನ ರಚನೆಗೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ಸಂವಿಧಾನದ ಶಿಲ್ಪಿ’ ಎಂದು ಕರೆಯಲಾಗಿದೆ ಎಂಬ ವಾಕ್ಯವು ಇಲ್ಲವಾಗಿದ್ದು, ಇದನ್ನು ಮುನ ಸೇರ್ಪಡೆಮಾಡಿ, ತಿದ್ದೋಲೆಯಲ್ಲಿ ಹೊರಡಿಸಬೇಕು.
7ನೇ ತರಗತಿ ಸಮಾಜ ವಿಜ್ಞಾನ ಭಾಗ-01ರ ಭಕ್ತಿ ಪಂಥ ಹಾಗೂ ಸೂಫಿ ಸಂತರು ಪಾಠವನ್ನು ಪೂರ್ಣವಾಗಿ ಕೈಬಿಡಲಾಗಿದೆ. 9ನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಭಾಗ-2 ರಲ್ಲಿ ಭಕ್ತಿಪಂಥ ಎಂಬ ಅಧ್ಯಾಯದಲ್ಲಿ ಪುರಂದರದಾಸರು, ಕನಕದಾಸರು ಕುರಿತು ವಿಷಯಗಳು ಸಂಕ್ಷಿಪ್ತಗೊಳಿಸಲಾಗಿದೆ. ಆದ್ದರಿಂದ 2021-22 ನೇ ಸಾಲಿನ 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-01ರ ಭಕ್ತಿ ಪಂಥ ಹಾಗೂ ಸೂಫಿ ಸಂತರು ಎಂಬ ಸಂಪೂರ್ಣ ಪಾಠವನ್ನು ತಿದ್ದೋಲೆಯಲ್ಲಿ ಹೊರಡಿಸಬೇಕು.
7ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದ ಪುಟ ಸಂಖ್ಯೆ 147 ರಲ್ಲಿ ‘ಗೊಂಬೆ ಕಲಿಸುವ ನೀತಿ’ ಪದ್ಯದ ಕೃತಿಕಾರರ ಹೆಸರು ಡಾ. ಆರ್.ಎನ್.ಜಯಗೋಪಾಲ್ ಎಂದು ತಪ್ಪಾಗಿ ಮುದ್ರಣಗೊಂಡಿದ್ದು, ಮೂಲ ಕೃತಿಕಾರರಾದ ಚಿ.ಉದಯಶಂಕರ್ರವರ ಕವಿ ಪರಿಚಯವನ್ನು ಸೇರ್ಪಡೆಗೊಳಿಸಿ, ತಿದ್ದೋಲೆಯಲ್ಲಿ ಹೊರಡಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
6ನೇ ತರಗತಿ ಸಮಾಜ ವಿಜ್ಞಾನ ಭಾಗ-1ರ ಪಾಠ ನಮ್ಮ ಹೆಮ್ಮೆಯ ರಾಜ್ಯ ಕರ್ನಾಟಕ ಪಾಠದಲ್ಲಿ ಸಿದ್ದಗಂಗಾ ಮಠ ಹಾಗೂ ಆದಿಚುಂಚನಗಿರಿ ಮಠದ ಕುರಿತಾದ ಸೇವೆಯ ಸಾಲುಗಳನ್ನು ಪುನಃ ಸೇರ್ಪಡೆ ಮಾಡಿ, ತಿದ್ದೋಲೆಯಲ್ಲಿ ಹೊರಡಿಸಬೇಕು.
7ನೇ ತರಗತಿಯ ಸಮಾಜವಿಜ್ಞಾನ ಭಾಗ-1 ರ ಮೈಸೂರು ಮತ್ತು ಇತರ ಸಂಸ್ಥಾನಗಳು ಎಂಬ ಪಾಠದಲ್ಲಿದ್ದ ಸುರಪುರ ನಾಯಕರ ಕುರಿತಾದ ವಿವರಗಳನ್ನು ಮರು ಸೇರ್ಪಡೆ ಮಾಡಬೇಕು.
9ನೇ ತರಗತಿಯ ಸಮಾಜ ವಿಜ್ಞಾನ ಭಾಗ-Iರ ಪಠ್ಯಪುಸ್ತಕದಲ್ಲಿ ಭಾರತದ ಮತ ಪರಿವರ್ತಕರು ಎಂಬ ಅಧ್ಯಾಯದಲ್ಲಿ ಬಸವಣ್ಣನವರ ಕುರಿತಾದ ವಿಷಯಾಂಶವನ್ನು ಮಾರ್ಪಡಿಸಿ, ತಿದ್ದೋಲೆಯಲ್ಲಿ ಹೊರಡಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
4ನೇ ತರಗತಿಯ ಪರಿಸರ ಅಧ್ಯಯನ ಪ್ರತಿಯೊಬ್ಬರು ವಿಶಿಷ್ಟ’ ಎಂಬ ಪಾಠದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಹೆಸರು ಮಾಡಿದ ಕುವೆಂಪು ರವರಿಗೆ ಚಿಕ್ಕಂದಿನಿಂದಲು ಕಥೆ, ಕವನ, ಪುಸ್ತಕ ಓದುವ, ಬರೆಯುವ ಅಭ್ಯಾಸ ಇತ್ತು. ಅನೇಕರ ಪ್ರೋತ್ಸಾಹದಿಂದ ಇವರು ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು” ಎಂಬ ಸಾಲುಗಳನ್ನು ಕೈಬಿಡುವ ಕುರಿತು ತಿದ್ದೋಲೆಯಲ್ಲಿ ಹೊರಡಿಸಬೇಕು. ಹಾಗೂ 7ನೇ ತರಗತಿ ಸಮಾಜ ವಿಜ್ಞಾನ ಭಾಗ-2ರ ಪಠ್ಯಮಸ್ತಕದ ಕರ್ನಾಟಕ ರಾಜ್ಯ ಏಕೀಕರಣ ಹಾಗೂ ಗಡಿವಿವಾದಗಳು’ ಎಂಬ ಪಾಠದಲ್ಲಿ ರಾಷ್ಟ್ರಕವಿ ಕುವೆಂಪು ರವರ ಹಾಗೂ ಹುಯಿಲಗೋಳ ನಾರಾಯಣರಾವ್ ರವರ ಭಾವಚಿತ್ರವನ್ನು ಆಳವಡಿಸಿ, ತಿದ್ದೋಲೆಯಲ್ಲಿ ಹೊರಡಿಸಬೇಕು ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.