ಬೆಂಗಳೂರು: ರಾಜ್ಯ ಸರಕಾರವು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಹೆಸರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಎಂದು ಮರು ನಾಮಕರಣ ಮಾಡಿ ಆದೇಶ ಹೊರಡಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ‘ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯನ್ನು ‘ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ’ ಎಂದು ಮರು ನಾಮಕರಣ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
12ನೇ ತರಗತಿ ವರೆಗಿನ ಶಿಕ್ಷಣವು ಶಾಲಾ ಶಿಕ್ಷಣ ವ್ಯಾಪ್ತಿಗೆ ಒಳಪಡುತ್ತದೆ ಎಂಬ ಅಂಶವನ್ನು ‘ರಾಷ್ಟ್ರೀಯ ಶಿಕ್ಷಣ ನೀತಿ-2020’ರಲ್ಲಿ ತಿಳಿಸಿರುವ ಹಿನ್ನೆಲೆಯಲ್ಲಿ ಮರುನಾಮಕರಣ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹೆಚ್ಚಿನ ರಾಜ್ಯಗಳಲ್ಲಿ ‘ಶಾಲಾ ಶಿಕ್ಷಣ ಇಲಾಖೆ’ ಎನ್ನುವ ಪದನಾಮ ರೂಢಿಯಲ್ಲಿದೆ. ಆದ್ದರಿಂದ, ರಾಜ್ಯದಲ್ಲಿಯೂ ಇದೇ ಮಾದರಿ ಅಳವಡಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಸೂಚಿಸಿದ್ದರು ಎನ್ನಲಾಗಿದೆ.