ಮುಂದಿನ ವರ್ಷದಿಂದ ಒಂದೇ ಸಿಇಟಿ; ಕಾಮೆಡ್-ಕೆ ರದ್ದತಿಗೆ ಖಾಸಗಿ ಕಾಲೇಜುಗಳ ಒಲವು, ಎಂಜಿನಿಯರಿಂಗ್ ಶುಲ್ಕ ಶೇ.10ರಷ್ಟು ಮಾತ್ರ ಹೆಚ್ಚಳ

Prasthutha|

ಬೆಂಗಳೂರು: ತಾನು ಈಗ ಪ್ರತ್ಯೇಕವಾಗಿ ನಡೆಸುತ್ತಿರುವ ಕಾಮೆಡ್-ಕೆ ಪ್ರವೇಶ ಪರೀಕ್ಷೆಯನ್ನು ರದ್ದುಪಡಿಸಿ, ಸರಕಾರದ ಸಿಇಟಿ ವ್ಯವಸ್ಥೆಯಡಿಗೆ ವಾಪಸ್ ಬರಲು ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟ (ಕ್ಯುಪೇಕಾ) ಆಸಕ್ತಿ ತೋರಿದೆ. ಈ ಸಂಬಂಧ ಒಪ್ಪಂದ ಆದ ಮೇಲೆ ಮುಂದಿನ ವರ್ಷದಿಂದ ಒಂದೇ ಸಿಇಟಿ ಮಾಡಲಾಗುವುದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

- Advertisement -


ಜೊತೆಗೆ, ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷದಿಂದ ಯಥಾಸ್ಥಿತಿಯಲ್ಲಿದ್ದ ಎಂಜಿನಿಯರಿಂಗ್ ಶಿಕ್ಷಣ ಶುಲ್ಕವನ್ನು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಹೊರೆಯಾಗದಂತೆ
ಕೇವಲ ಶೇ.10ರಷ್ಟು ಮಾತ್ರ ಹೆಚ್ಚಿಸಲು ನಿರ್ಧರಿಸಲಾಗಿದೆ. ಶೇ.25ರಷ್ಟು ಶುಲ್ಕ ಏರಿಕೆ ಮಾಡಬೇಕೆಂಬ ಕ್ಯುಪೇಕಾ ಬೇಡಿಕೆ ಕಾರ್ಯಸಾಧುವಲ್ಲ ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಕ್ಯುಪೇಕಾ ಪ್ರತಿನಿಧಿಗಳ ಜತೆ ವಿಕಾಸಸೌಧದಲ್ಲಿ ಬುಧವಾರ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಶುಲ್ಕ ಹೆಚ್ಚಳವು ಖಾಸಗಿ ಕಾಲೇಜುಗಳಲ್ಲಿ ಇರುವ ಸರಕಾರಿ ಎಂಜಿನಿಯರಿಂಗ್ ಸೀಟುಗಳಿಗೆ ಪ್ರವೇಶ ಪಡೆಯಲಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯಿಸುತ್ತದೆ. ಇದನ್ನು ಮೀರಿ ಹೆಚ್ಚಿನ ಶುಲ್ಕ ವಸೂಲು ಮಾಡಿದರೆ ಅಂತಹ ಕಾಲೇಜುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಇದಕ್ಕೆ ಕ್ಯುಪೇಕಾ ಪ್ರತಿನಿಧಿಗಳು ಕೂಡ ಒಪ್ಪಿಕೊಂಡಿದ್ದಾರೆ’ ಎಂದರು.


ಖಾಸಗಿ ಕಾಲೇಜುಗಳು ದುಬಾರಿ ಶುಲ್ಕದ ಮ್ಯಾನೇಜ್ಮೆಂಟ್ ಸೀಟುಗಳಿಗಾಗಿ ತಾವೇ ನಡೆಸುತ್ತಿರುವ ಕಾಮೆಡ್-ಕೆ ಪರೀಕ್ಷೆಯನ್ನು ನಿಲ್ಲಿಸುವ ಸುಳಿವು ನೀಡಿವೆ. ಇದರ ಸಾಧ್ಯತೆಗಳನ್ನು ಪರಿಶೀಲಿಸಲು ಉನ್ನತ ಸಮಿತಿ ರಚಿಸಲಾಗುವುದು. ಇದನ್ನು ಆಧರಿಸಿ, ಕ್ಯುಪೇಕಾ ಜತೆ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಅವರು ವಿವರಿಸಿದರು.
ಕಾಮೆಡ್-ಕೆ ಸ್ಥಗಿತಗೊಂಡರೆ, ಸರಕಾರವು ಸಿಇಟಿಯನ್ನು ಅಖಿಲ ಭಾರತ ವ್ಯಾಪ್ತಿಯಲ್ಲಿ ನಡೆಸಲಿದೆ. ಇದರಲ್ಲಿ ವಿದ್ಯಾರ್ಥಿಗಳು ಪಡೆಯುವ ರಾಂಕಿಂಗ್ ಆಧರಿಸಿ, ಈಗಿನಂತೆಯೇ ಸೀಟು ಹಂಚಲಾಗುವುದು. ಇದರಿಂದ ಈಗ ಆಗುತ್ತಿರುವ ಗೊಂದಲ ಮತ್ತು ಅಪವ್ಯಯ ಎರಡೂ ನಿವಾರಣೆ ಆಗಲಿವೆ ಎಂದು ಸಚಿವರು ನುಡಿದರು.
ಸಭೆಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಕ್ಯುಪೇಕಾ ಅಧ್ಯಕ್ಷರೂ ಆದ ವಿಧಾನ ಪರಿಷತ್ತಿನ ಸದಸ್ಯ ಮಂಜುನಾಥ ಭಂಡಾರಿ ಸೇರಿದಂತೆ ಇತರ ಪದಾಧಿಕಾರಿಗಳು ಇದ್ದರು.



Join Whatsapp