ಬೆಂಗಳೂರು: ಒಮ್ಮೆ ವಿಚಾರಣೆ ಮುಗಿದು, ಮುಚ್ಚಲ್ಪಟ್ಟಿದ್ದ ಪ್ರಕರಣವನ್ನು ಬೇಕಂತಲೇ ಪುನಃ ಕೆದಕಿ, ಈ.ಡಿ ಸತತ ಐದು ದಿನಗಳಿಂದ ರಾಹುಲ್ ಗಾಂಧಿಯವರ ವಿಚಾರಣೆ ನಡೆಸುತ್ತಿರುವುದು ದ್ವೇಷ ರಾಜಕೀಯದ ಪರಮಾವಧಿ ಎಂದು ಎಂದು ಕಾಂಗ್ರೆಸ್ ಶಾಸಕ ಬಿ.ಝಡ್.ಝಮೀರ್ ಅಹ್ಮದ್ ಖಾನ್ ಟೀಕಿಸಿದ್ದಾರೆ.
ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಈ.ಡಿ. ವಿಚಾರಣೆ ನೆಪದಲ್ಲಿ ಮಾನಸಿಕ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಬುಧವಾರ ಸಿರ್ಸಿ ವೃತ್ತದ ಬಳಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಇದು ದುರುದ್ದೇಶ ಪೂರಿತ ಹುನ್ನಾರವಲ್ಲದೇ ಮತ್ತೇನೂ ಅಲ್ಲ. ಮುಂಬರುವ 2024ರ ಚುನಾವಣೆಯ ದೃಷ್ಟಿಯಲ್ಲಿ ಇಟ್ಟುಕೊಂಡು ಕೇಂದ್ರದ ಬಿಜೆಪಿ ಸರಕಾರ ಈ.ಡಿ. ಅಧಿಕಾರಿಗಳಿಂದ ನಮ್ಮ ಪಕ್ಷದ ನಾಯಕರ ಮೇಲೆ ವಿಚಾರಣೆಯ ಅಸ್ತ್ರ ಪ್ರಯೋಗಿಸಿ ಬೆದರಿಸುವ ಪ್ರಯತ್ನ ಮಾಡುತ್ತಿದೆ ಎಂದು ಝಮೀರ್ ಅಹ್ಮದ್ ಖಾನ್ ದೂರಿದರು. ಈ.ಡಿ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸುವವರೆಗೆ ನಮ್ಮ ಹೋರಾಟವೂ ನಿಲ್ಲದು. ಇಂದು ನಾವು ಪ್ರತಿಭಟಿಸಿದ್ದೇವೆ, ಇದೇ ರೀತಿ ದೇಶಾದ್ಯಂತ ಕಾಂಗ್ರೆಸ್ ನಿಂದ ಪ್ರತಿಭಟನೆ ಮುಂದುವರಿಯುತ್ತದೆ ಎಂದು ಅವರು ಹೇಳಿದರು.
ಈ.ಡಿ.ಅಧಿಕಾರಿಗಳು 58 ಗಂಟೆಗಳ ಕಾಲ ರಾಹುಲ್ ಗಾಂಧಿಯವರನ್ನು ವಿಚಾರಣೆಗೊಳಪಡಿಸಿದೆ. ಮುಚ್ಚಿರುವ ಪ್ರಕರಣವನ್ನು ಪುನಃ ತೆರೆದು ಇಷ್ಟೊಂದು ತನಿಖೆ ನಡೆಸುವ ಅಗತ್ಯವಿದೆ. ಇಂತಹ ಹುನ್ನಾರಗಳಿಗೆಲ್ಲ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಹೆದರುವುದಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.