45.40 ಸೆಕೆಂಡುಗಳಲ್ಲಿ 100 ಮೀಟರ್ ಓಡಿದ 105 ವರ್ಷದ ಅಜ್ಜಿ

Prasthutha|

ಹರ್ಯಾಣ: ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆಯಷ್ಟೇ, ಕನಸನ್ನು ಬೆಂಬತ್ತಲು, ಗುರಿ ತಲುಪಲು ವಯಸ್ಸು ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುವುದನ್ನು ಹರ್ಯಾಣದ 105 ವರ್ಷದ ಅಜ್ಜಿ ರಾಂಬಾಯಿ ನಿರೂಪಿಸಿದ್ದಾರೆ. ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ವಡೋದರಾದಲ್ಲಿ ಆಯೋಜಿಸಿದ್ದ ಚೊಚ್ಚಲ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 105 ವರ್ಷದ ರಾಂಬಾಯಿ ʻಡಬಲ್ ಚಿನ್ನʼದ ಸಾಧನೆ ಮಾಡುವ ಮೂಲಕ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದ್ದಾರೆ. 100 ಮೀಟರ್ ಓಟ ವಿಭಾಗದಲ್ಲಿ ಸ್ಪರ್ಧಿಸಿದ್ದ ರಾಂಬಾಯಿ 45.40 ಸೆಕೆಂಡಗಳಲ್ಲಿ, ಸಮಯದೊಂದಿಗೆ ಮೊದಲಿಗರಾಗಿ ಗುರಿ ತಲುಪಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮೊದಲು 200 ಮೀಟರ್ ಓಟದಲ್ಲೂ ರಾಂಬಾಯಿ ಪ್ರಥಮ ಸ್ಥಾನ ಪಡೆದಿದ್ದರು. 1 ನಿಮಿಷ, 52.17 ಸೆಕೆಂಡ್ಗಳ ಸಮಯದಲ್ಲಿ 200 ಮೀಟರ್ ಗುರಿಯನ್ನು ರಾಂಬಾಯಿ ತಲುಪಿದ್ದರು.

- Advertisement -

ಕೂಟದ 85 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಇತರ ಯಾವುದೇ ಸ್ಪರ್ಧಿಗಳು ಭಾಗವಹಿಸದ ಕಾರಣ ರಾಂಬಾಯಿ ಏಕಾಂಗಿಯಾಗಿ ಟ್ರ್ಯಾಕ್ನಲ್ಲಿದ್ದರು. ಈ ವೇಳೆ ಮೈದಾನದ ಸುತ್ತಲೂ ಇದ್ದ ನೂರಾರು ಪ್ರೇಕ್ಷಕರು ಹರ್ಷೋದ್ಗಾರಗಳ ಮೂಲಕ ಹಿರಿಯಜ್ಜಿಯ ಮನೋಧೈರ್ಯಕ್ಕೆ ಬೆಂಬಲ ಸೂಚಿಸಿದರು.

ಮಾನ್ ಕೌರ್ ದಾಖಲೆ ಮುರಿದ ರಾಂಬಾಯಿ:
ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಕೂಟದಲ್ಲಿ ʻಡಬಲ್ ಚಿನ್ನʼ ಸಾಧನೆ ಮಾಡಿದ ರಾಂಬಾಯಿ, ಈ ವಿಭಾಗದಲ್ಲಿ ನೂತನ ದಾಖಲೆಯನ್ನು ನಿರ್ಮಿಸಿದರು. ಇದಕ್ಕೂ ಮೊದಲು ವಿಶ್ವ ಮಾಸ್ಟರ್ಸ್ನಲ್ಲಿ 100 ಮೀಟರ್ ಓಟವನ್ನು 74 ಸೆಕೆಂಡುಗಳಲ್ಲಿ ಪೂರ್ತಿಗೊಳಿಸಿದ್ದ 101 ವರ್ಷದ ಮಾನ್ ಕೌರ್ ದಾಖಲೆ ನಿರ್ಮಿಸಿದ್ದರು. ಅಮೋಘ ಸಾಧನೆಯ ಸಂತಸ ಹಂಚಿಕೊಂಡ ರಾಂಬಾಯಿ, ʻಇದೊಂದು ಅಪೂರ್ವ ನಿಮಿಷ. ಮುಂದಿನ ದಿನಗಳಲ್ಲಿ ಹೆಚ್ಚಿನ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಲು ಬಯಸುತ್ತೇನೆ” ಎಂದಿದ್ದಾರೆ. ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಕೂಟಗಳಲ್ಲಿ ಭಾಗವಹಿಸುವುದು ನನ್ನ ಮುಂದಿನ ಗುರಿಯಾಗಿದ್ದು, ಅದಕ್ಕಾಗಿ ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸಲು ಯೋಚಿಸುತ್ತಿದ್ದೇನೆ ಎಂದು ರಾಂಬಾಯಿ ಹೇಳಿದ್ದಾರೆ.

- Advertisement -

ಕಿರಿಯ ವಯಸ್ಸಿನಲ್ಲಿ ಕ್ರೀಡಾಕೂಟಗಳಲ್ಲಿ ಯಾಕೆ ಭಾಗವಹಿಸಿರಲಿಲ್ಲ ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಶತಾಯುಷಿ, “ಮೇನ್ ತೊ ತೈಯಾರ್ ಥಿ. ಲೇಕಿನ್, ಮೇರೆ ಕೊ ಕೋಯಿ ಮೌಕಾ ಹಿ ನಹೀ ದಿಯಾ, ( ಸ್ಪರ್ಧೆಗಳಲ್ಲಿ ಭಾಗವಹಿಸಲು ನಾನು ಸಿದ್ಧಳಾಗಿದ್ದೆ ಆದರೆ ಯಾರೂ ನನಗೆ ಅವಕಾಶ ನೀಡಲಿಲ್ಲ).” ಎಂದಿದ್ದಾರೆ. ಆಹಾರದ ಕುರಿತ ಪ್ರಶ್ನೆಗೆ ಉತ್ತರಿಸಿದ ರಂಬಾಯಿ “ನಾನು ಶುದ್ಧ ಸಸ್ಯಾಹಾರಿ, ದಿನಕ್ಕೆ ಸುಮಾರು 250 ಗ್ರಾಂ ತುಪ್ಪ ಮತ್ತು 500 ಗ್ರಾಂ ಮೊಸರು ಮತ್ತು ಎರಡು ಬಾರಿ 500 ಮಿಲಿ ಶುದ್ಧ ಹಾಲನ್ನು ಕುಡಿಯುತ್ತೇನೆ. ಬಜ್ರೆ ಕಿ ರೋಟಿ (ರಾಗಿಯಿಂದ ಮಾಡಿದ ಚಪ್ಪಟೆ ಬ್ರೆಡ್) ಅನ್ನು ಇಷ್ಟಪಡುತ್ತೇನೆ ಎಂದಿದ್ದಾರೆ.
ಜನವರಿ 1, 1917 ರಂದು ದೆಹಲಿಯಿಂದ 150 ಕಿಲೋ ಮೀಟರ್ ದೂರದಲ್ಲಿರುವ ಕದ್ಮಾ ಗ್ರಾಮದಲ್ಲಿ ಜನಿಸಿದ್ದ ರಾಂಬಾಯಿಯ ʻಡಬಲ್ ಗೋಲ್ಡ್ʼ ಸಾಧನೆ ಪ್ರತಿಯೊಬ್ಬರಿಗೂ ಪ್ರೇರಣೆಯಾಗುವಂತಿದೆ. ಕಳೆದ ವರ್ಷ ನವೆಂಬರ್ನಲ್ಲಿ ವಾರಣಾಸಿಯಲ್ಲಿ ಮಾಸ್ಟರ್ಸ್ ಅಥ್ಲೆಟಿಕ್ ಕೂಟಕ್ಕೆ ಪದಾರ್ಪಣೆ ಮಾಡಿದ್ದ ರಾಂಬಾಯಿ, ಮಹಾರಾಷ್ಟ್ರ, ಕರ್ನಾಟಕ, ಕೇರಳದಲ್ಲಿ ನಡೆದ ಹಿರಿಯರ ಕೂಟಗಳಲ್ಲೂ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ.

ರಾಂಬಾಯಿ ಅವರ ಮೊಮ್ಮಗಳು ಶರ್ಮಿಳಾ ಸಾಂಗ್ವಾನ್ ಕೂಡ ರಾಷ್ಟ್ರೀಯ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಕೂಟದಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾರೆ. ಅಜ್ಜಿಯ ಯಶಸ್ಸು ಮತ್ತು ಶಕ್ತಿಯ ರಹಸ್ಯವನ್ನು ಬಿಚ್ಚಿಟ್ಟ ಶರ್ಮಿಳಾ, ʻಆಹಾರ ಮತ್ತು ಹಳ್ಳಿಯಲ್ಲಿನ ಮಾಲಿನ್ಯರಹಿತ ವಾತಾವರಣ ಮತ್ತು ಈ ವಯಸ್ಸಿನಲ್ಲಿಯೂ ಹೊಲಗಳಲ್ಲಿ ಹೆಚ್ಚು ಕೆಲಸ ಮಾಡುವಿದರಿಂದ ಅವರು ಆರೋಗ್ಯವಾಗಿದ್ದಾರೆ. ಸಾಮಾನ್ಯ ದಿನಗಳಲ್ಲಿ ಅವರು ಅವಳು 3-4 ಕಿಮೀ ಓಡುತ್ತಾರೆ ಎಂದಿದ್ದಾರೆ.



Join Whatsapp