ಎಂಎಲ್ ಸಿ ಚುನಾವಣೆಯಲ್ಲಿ ಅಡ್ಡ ಮತದಾನ: ಶಿವಸೇನೆಯ ಎಲ್ಲಾ ಶಾಸಕರ ತುರ್ತು ಸಭೆ ಕರೆದ ಉದ್ಧವ್ ಠಾಕ್ರೆ

Prasthutha|

ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ -ಎಂಎಲ್ ಸಿ  ಚುನಾವಣೆಯ ನಂತರ ಶಿವಸೇನೆ ಮುಖ್ಯಸ್ಥ ಹಾಗೂ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಏಕನಾಥ್​ ಶಿಂಧೆ ಅವರು ಕೆಲ ಶಾಸಕರೊಂದಿಗೆ ಗುಜರಾತ್ ಹೋಟೆಲ್ ವೊಂದರಲ್ಲಿ ತಂಗಿದ್ದಾರೆಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಮಂಗಳವಾರ ಶಿವಸೇನೆಯ ಎಲ್ಲ ಶಾಸಕರ ತುರ್ತು ಸಭೆ ಕರೆದಿದ್ದಾರೆ.

- Advertisement -

ಶಿಂಧೆಯವರು ಸೋಮವಾರ ಸಂಜೆಯಿಂದಲೂ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಹೇಳಲಾಗುತ್ತಿದ್ದು, ಅವರೊಂದಿಗೆ ಹಲವು ಶಾಸಕರೂ ನಾಪತ್ತೆಯಾಗಿದ್ದಾರೆಂದು ಹೇಳಲಾಗುತ್ತಿದೆ.

20-25 ಮಂದಿ ಶಾಸಕರೊಂದಿಗೆ ಏಕನಾಥ್ ಶಿಂಧಯವರು ಗುಜರಾತ್ ಸಾಜ್ಯದ ಸೂರತ್ ನಲ್ಲಿರುವ ಹೋಟೆಲ್ ಲೆ ಮೆರಿಡಿಯನ್ ನಲ್ಲಿ ತಂಗಿದ್ದಾರೆಂದು ವರದಿಗಳು ತಿಳಿಸಿವೆ. ಹೋಟೆಲ್’ಗೆ ಗುಜರಾತ್ ರಾಜ್ಯದ ಪೊಲೀಸರು ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದು, ಎಷ್ಟು ಮಂದಿ ಶಾಸಕರು ಹೋಟೆಲ್ ನಲ್ಲಿ ತಂಗಿದ್ದಾರೆಂಬುದು ಇನ್ನೂ ಸ್ಪಷ್ಟವಾಗಿಲ್ಲ.

- Advertisement -

ಹೋಟೆಲ್ ನಲ್ಲಿ ತಂಗಿರುವ ಶಿಂಧೆಯವರು ಶೀಘ್ರದಲ್ಲಿಯೇ ಪತ್ರಿಕಾಗೋಷ್ಠಿ ನಡೆಸಲಿದ್ದು, ತಮ್ಮ ನಿಲುವು ಕುರಿತು ಸ್ಪಷ್ಟಪಡಿಸಲಿದ್ದಾರೆಂದು ಮೂಲಗಳು ತಿಳಿಸಿವೆ.

ಸೋಮವಾರ ನಡೆದ ಮಹಾರಾಷ್ಟ್ರ ವಿಧಾನ ಪರಿಷತ್ (ಎಂಎಲ್ ಸಿ)  ಚುನಾವಣೆಯಲ್ಲಿ ಬಿಜೆಪಿ ಐದು, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮತ್ತು ಶಿವಸೇನೆ ತಲಾ ಎರಡು ಸ್ಥಾನಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ ಒಟ್ಟು 10 ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಬಳಿಕ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಜೊತೆಗೆ ಸಭೆ ನಡೆಸಿದ ಶಿಂಧೆ, ಸಭೆ ಬಳಿಕ ತಮ್ಮ ಬೆಂಬಲಿಗ ಶಾಸಕರೊಂದಿಗೆ ನೇರವಾಗಿ ಸೂರತ್‌ಗೆ ತೆರಳಿದರು ಎಂದು ಮೂಲಗಳು ತಿಳಿಸಿದೆ.

ಶಿಂಧೆ ಅವರು ಬಿಜೆಪಿಯ ಹಿರಿಯ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆಂದು ಹೇಳಲಾಗುತ್ತಿದ್ದು, ಗುಜರಾತ್ ಬಿಜೆಪಿ ಅಧ್ಯಕ್ಷ ಸಿಆರ್ ಪಾಟೀಲ್ ಶಿಂಧೆ ಅವರನ್ನು ಬಿಜೆಪಿಗೆ ಹತ್ತಿರವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆಂದು ಮೂಲಗಳಿಂದ ತಿಳಿದು ಬಂದಿದೆ.

ಇಂದು ಮಧ್ಯಾಹ್ನ 12 ಗಂಟೆಗೆ ಶಿವಸೇನೆ ಶಾಸಕರ ಸಭೆ ಕರೆಯಲಾಗಿದ್ದು, ಈ ಸಭೆಗೆ ಎಷ್ಟು ಶಾಸಕರು ಹಾಜರಾಗುತ್ತಾರೆ ಎಂಬುದರ ಮೇಲೆ ಮಹಾವಿಕಾಸ್ ಅಘಾಡಿಯ ಭವಿಷ್ಯ ನಿಂತಿದೆ.



Join Whatsapp