ಕಾಬೂಲ್: ಜೂನ್ 18ರ ಶನಿವಾರ ಬೆಳಿಗ್ಗೆ ಅಪರಿಚಿತ ಬಂದೂಕುದಾರಿಗಳು ಕಾಬೂಲ್ ಗುರುದ್ವಾರಕ್ಕೆ ನುಗ್ಗಿ ಗುಂಡಿನ ದಾಳಿ ನಡೆಸಿದ್ದರಿಂದ ಇಬ್ಬರು ಸಾವಿಗೀಡಾಗಿದ್ದಾರೆ. 60ರ ಪ್ರಾಯದ ಸವೀಂದರ್ ಸಿಂಗ್ ಮತ್ತು ದಿಲ್ಲಿಯಲ್ಲಿ ಕುಟುಂಬ ವಾಸಿಸುವ ಘಜ್ನಿ ಮೂಲದವರೊಬ್ಬರು ಸಾವಿಗೀಡಾಗಿದ್ದಾರೆ. ಅಹ್ಮದ್ ಎನ್ನುವ ಆತನು ಗುರುದ್ವಾರದ ಭದ್ರತಾ ಸಿಬ್ಬಂದಿಯಾಗಿದ್ದ.
“ಬಂದೂಕುದಾರಿಗಳು ಗುರುದ್ವಾರ ಬಾಗಿಲು ಹೊಕ್ಕು ಗುಂಡು ಹಾರಿಸಿದರು. ನಾವು ಕಟ್ಟಡದ ಇನ್ನೊಂದು ಪಕ್ಕವಾದ ಬಲಬದಿಯಲ್ಲಿದ್ದೆವು. ಇನ್ನೂ ಕೆಲವರು ಸತ್ತಿರಬಹುದು. ವಿವರ ಸಂಪೂರ್ಣ ತಪಾಸಿಸಿದ ಬಳಿಕವಷ್ಟೆ ಹೇಳಬಹುದು” ಎಂದು ಗುರುದ್ವಾರ ದಶ್ಮೇಶ್ ಪಿತಾ ಗುರು ಗೋಬಿಂದ್ ಸಿಂಗ್ ಕರ್ತೆ ಪರ್ವಾನ್ ಇದರ ಅಧ್ಯಕ್ಷ ಗುರ್ನಾಮ್ ಸಿಂಗ್ ತಿಳಿಸಿದ್ದಾರೆ.
ದಾಳಿ ನಡೆದಾಗ ಗುರುದ್ವಾರದಲ್ಲಿ 25ರಷ್ಟು ಜನರಿದ್ದರು ಎಂದೂ ಅವರು ತಿಳಿಸಿದರು.
“ಕಾಬೂಲ್ ಗುರುದ್ವಾರದ ಮೇಲೆ ದಾಳಿ ನಡೆಸಿದವರು ತಾಲಿಬಾನ್ ವಿರೋಧಿಗಳಾದ ದಾಯೇಶ್ ಗುಂಪಿನವರು. ತಾಲಿಬಾನ್ ಗಳು ಕೂಡಲೆ ಬಂದು ದಾಳಿಕೋರರ ಬೆನ್ನಟ್ಟಿದ್ದಾರೆ. ನಾಲ್ವರು ಸಿಖ್ ಅನುಯಾಯಿಗಳು ನಾಪತ್ತೆಯಾಗಿದ್ದಾರೆ” ಎಂದು ಪಂಜಾಬ್ ರಾಜ್ಯ ಸಭಾ ಸಂಸದ ವಿಕ್ರಂ ಸಹ್ನೇ ಹೇಳಿದರು.
ಕಾಬೂಲ್ ಗುರುದ್ವಾರದ ಮೇಲಿನ ದಾಳಿಯ ಪರಿಸ್ಥಿತಿಯನ್ನು ಗಮನಿಸುತ್ತಿರುವುದಾಗಿ ಭಾರತ ಸರಕಾರ ಹೇಳಿತು. “ಕಾಬೂಲ್ ಗುರುದ್ವಾರದ ಮೇಲಿನ ದಾಳಿಯ ವಿಷಯದಲ್ಲಿ ನಾವು ಕಳವಳಕ್ಕೀಡಾಗಿದ್ದೇವೆ” ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಹೇಳಿದರು.
“ಗುರುದ್ವಾರ ಕರ್ತೆ ಪರ್ವಾನ್ ಮೇಲೆ ನಡೆದ ಗುಂಡು ದಾಳಿಯ ಹೇಡಿತನದ್ದಾಗಿದೆ. ನಾವು ಕಠಿಣ ಶಬ್ದಗಳಿಂದ ಅದನ್ನು ಖಂಡಿಸುವೆವು” ಎಂದು ವಿದೇಶಾಂಗ ಮಂತ್ರಿ ಎಸ್. ಜೈಶಂಕರ್ ಟ್ವೀಟ್ ಮಾಡಿದ್ದಾರೆ.
“ನಮ್ಮ ಮೊದಲ ಆದ್ಯತೆ ಅಲ್ಲಿನ ಸಿಖ್ ಜನರ ಸುರಕ್ಷತೆಯಾಗಿದೆ. ಕಳವಳದಿಂದ ನಾವು ಅಲ್ಲಿನ ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ” ಎಂದೂ ಅವರು ತಿಳಿಸಿದರು.
“ಗುರುದ್ವಾರದೊಳಗಿನ ಭಕ್ತರ ಮೇಲೆ ಗುಂಡು ಹಾರಿಸಿದ ಸುದ್ದಿ ತಿಳಿದು ಬಂತು. ನಾನು ಎಲ್ಲರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ. ಕಾಬೂಲಿನ ಅಲ್ಪಸಂಖ್ಯಾತರ ಸುರಕ್ಷತೆಗೆ ಏನೆಲ್ಲ ಬೇಕೋ ಕೂಡಲೆ ಒದಗಿಸಬೇಕು ಎಂದು ನಾನು ಪ್ರಧಾನಿ ಮೋದಿಯವರನ್ನು ಒತ್ತಾಯಿಸುತ್ತೇನೆ” ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಟ್ವೀಟ್ ನಲ್ಲಿ ಹೇಳಿದ್ದಾರೆ.