ನವದೆಹಲಿ: ನಟಿ ಸಾಯಿ ಪಲ್ಲವಿ ಅಭಿನಯದ ‘ವಿರಾಟ ಪರ್ವಂ’ ಸಿನಿಮಾ ಬಿಡುಗಡೆ ಪೂರ್ವ ವ್ಯವಹಾರಗಳನ್ನೂ ಸೇರಿಸಿ ಮೊದಲ ದಿನವೇ 15 ಕೋಟಿ ಬಾಚಿ ದಾಖಲೆ ಸೃಷ್ಟಿಸಿದೆ.
ಸಾಯಿ ಪಲ್ಲವಿ ಹಾಗೂ ರಾಣಾ ದಗ್ಗುಬಾಟಿ ನಟಿಸಿರುವ ತೆಲುಗು ಸಿನಿಮಾಕ್ಕೆ ವೇಣು ಉಡುಗುಲ ಅವರು ನಿರ್ದೇಶನ ಮಾಡಿದ್ದಾರೆ. ಅಲ್ಲದೆ, ಈ ಚಿತ್ರವನ್ನು ಕೇವಲ ತೆಲುಗಿನಲ್ಲಿ ಮಾತ್ರ ರಿಲೀಸ್ ಮಾಡಲಾಗಿದ್ದು, ಮೊದಲ ದಿನ 15 ಕೋಟಿ ಬಾಚಿದೆ.
ಕಾಶ್ಮೀರದ ಹತ್ಯೆ ಮತ್ತು ಗೋವಿನ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವುದು ಎರಡೂ ಒಂದೇ ರೀತಿಯ ಅಮಾನವಿಯತೆ ಎಂದು ಹೇಳಿದ್ದ ನಟಿ ಸಾಯಿ ಪಲ್ಲವಿ ಅವರನ್ನು ಬಲಪಂಥೀಯ ಮಾಧ್ಯಮಗಳು ಸೇರಿದಂತೆ ಸಂಘಪರಿವಾರದವರು ಈ ಚಿತ್ರವನ್ನು ಬಹಿಷ್ಕರಿಸುವ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಆದಾಗ್ಯೂ ಈ ಸಿನಿಮಾಕ್ಕೆ ಹಲವರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಚಿತ್ರ ನೋಡಿದ ಪ್ರೇಕ್ಷಕರು ಫಿದಾ ಆಗಿದ್ದಾರೆ.
1990ರ ಸಮಯದಲ್ಲಿ ತೆಲಂಗಾಣದಲ್ಲಿ ನಡೆದ ಕೆಲವು ಸತ್ಯ ಘಟನೆಗಳನ್ನು ಆಧರಿಸಿ ‘ವಿರಾಟ ಪರ್ವಂ’ ಸಿನಿಮಾ ಸಿದ್ಧವಾಗಿದೆ.
ಇನ್ನೊಂದೆಡೆ ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್’ನ ವಿವಾದಿತ ನಟಿ ಕಂಗನಾ ರಣಾವತ್ ಅಭಿನಯದ ಧಾಕಡ್ ಚಿತ್ರ ಕಳಪೆ ಪ್ರದರ್ಶನದಿಂದಾಗಿ ಬಾಕ್ಸಾಫೀಸ್’ನಲ್ಲಿ ಹೀನಾಯವಾಗಿ ಸೋತಿತ್ತು. ನೂರು ಕೋಟಿ ಬಂಡವಾಳದ ಸಿನೆಮಾ ಕೇವಲ 3.5 ಕೋಟಿ ರೂ. ಅಷ್ಟೆ ಗಳಿಸಿತ್ತು. ಮೂರು ದಿನ ಕಳೆಯುವುದರೊಳಗೆ ಕೆಲವೆಡೆ ಪ್ರದರ್ಶನವನ್ನೇ ರದ್ದುಗೊಳಿಸಲಾಗಿತ್ತು. ಹಲವು ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸಲು ಒಬ್ಬ ಪ್ರೇಕ್ಷಕನೂ ಬಂದಿಲ್ಲ ಎಂದು ವರದಿಯಾಗಿದ್ದವು.