ಸುರತ್ಕಲ್ ತಾತ್ಕಾಲಿಕ ಟೋಲ್’ಗೇಟ್ ತೆರವಿಗೆ ಹೋರಾಟ ಸಮಿತಿ ಆಗ್ರಹ

Prasthutha|

ಸುರತ್ಕಲ್: ಆರು ತಿಂಗಳ ಅವಧಿಗೆ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡ ಸುರತ್ಕಲ್ ಟೋಲ್’ಗೇಟ್ ಸ್ಥಳೀಯ ಸಂಸದ, ಶಾಸಕರುಗಳ ಬೇಜವಾಬ್ದಾರಿತನದಿಂದ ಏಳು ವರ್ಷಗಳಿಂದ ಅಕ್ರಮವಾಗಿ ಸುಂಕ ವಸೂಲಿ ಮಾಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಸುರತ್ಕಲ್ ತಾತ್ಕಾಲಿಕ ಟೋಲ್’ಗೇಟ್ ಅನ್ನು ತೆರವುಗೊಳಿಸಬೇಕೆಂದು ಟೋಲ್’ಗೇಟ್ ಹೋರಾಟ ಸಮಿತಿ ಆಗ್ರಹಿಸಿದೆ.

- Advertisement -

ಇಂದು ನಡೆದ ಪತ್ರಿಗೋಷ್ಠಿಯಲ್ಲಿ ಮಾತನಾಡಿದ ಟೋಲ್’ಗೇಟ್ ಸಂಚಾಲಕ ಮುನೀರ್ ಕಾಟಿಪಳ್ಳ, ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ “ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್” ಸತತವಾಗಿ ಹೋರಾಟಗಳನ್ನು ಸಂಘಟಿಸಿದೆ. ಹೋರಾಟಗಳು ತೀವ್ರಗೊಂಡಾಗಲೆಲ್ಲ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಭರತ್ ಶೆಟ್ಟಿ ಟೋಲ್ ಗೇಟ್ ಮುಚ್ಚುವ ಭರವಸೆ ನೀಡಿ ಪ್ರತಿಭಟನೆಯ ತೀವ್ರತೆ ಕುಗ್ಗಿಸುವ ಯತ್ನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಳೆದ ಮಾರ್ಚ್ ತಿಂಗಳಲ್ಲಿ ಟೋಲ್ ತೆರವು ಹೋರಾಟ ತೀವ್ರ ಸ್ವರೂಪ ಪಡೆದಾಗ ಸಂಸದರು ದೆಹಲಿಯಲ್ಲಿ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಸುರತ್ಕಲ್ ಟೋಲ್ ಕೇಂದ್ರವನ್ನು ನವ ಮಂಗಳೂರು ಬಂದರು ಒಳಭಾಗಕ್ಕೆ ವರ್ಗಾಯಿಸಲು ಸಚಿವರು ಸೂಚಿಸಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಮಧ್ಯೆ ಮಾರ್ಚ್ 22 ರಂದು ಹೆಜಮಾಡಿ ಟೋಲ್ ಗೇಟ್ ನಿಂದ ಸುರತ್ಕಲ್ ಟೋಲ್ ಗೇಟ್ ವರಗೆ ಸಾವಿರಾರು ಜನರ ಪಾದಯಾತ್ರೆ ನಡೆದಿತ್ತು. ಅದೇ ದಿನ ಸಚಿವ ನಿತಿನ್ ಗಡ್ಕರಿಯವರು 9೦ ಕಿ ಮಿ ಒಳಗಡೆ ಇರುವ ಎಲ್ಲಾ ಟೋಲ್ ಸಂಗ್ರಹ ಕೇಂದ್ರಗಳನ್ನು 9೦ ದಿನಗಳ ಒಳಗಡೆ ತೆರವುಗೊಳಿಸುವುದಾಗಿ ಲೋಕಸಭೆಯಲ್ಲಿ ಪ್ರಕಟಿಸಿದ್ದರು. ಸಚಿವರ ಅದೇ ಮಾತನ್ನು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಭರತ್ ಶೆಟ್ಟಿ ಮಂಗಳೂರಿನಲ್ಲಿ ಪುನರುಚ್ಚಿಸಿ 9೦ ದಿನಗಳಲ್ಲಿ ಸುರತ್ಕಲ್ ಟೋಲ್ ಕೇಂದ್ರ ತೆರವುಗೊಳ್ಳಲಿದೆ ಎಂದು ಜಿಲ್ಲೆಯ ಜನತೆಗೆ ಮಾತುಕೊಟ್ಟಿದ್ದರು. ಈ ಸ್ಪಷ್ಟವಾದ ಭರವಸೆಯ ಕಾರಣಕ್ಕೆ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು ಎಂದು ಅವರು ಹೇಳಿದರು.

- Advertisement -

ಸದ್ಯ ಈ ಅಕ್ರಮ ವಸೂಲಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಭರತ್ ಶೆಟ್ಟಿ ನೇರ ಹೊಣೆ. ಈ ಕುರಿತು ಸಂಸದ, ಶಾಸಕರು ತಕ್ಷಣ ಕಾರ್ಯಪ್ರವೃತ್ತರಾಗಿ ಜೂನ್ 22 ಕ್ಕೆ ಟೋಲ್ ಸಂಗ್ರಹ ಕೊನೆಗೊಳಿಸಲು ಕ್ರಮ ಕೈಗೊಳ್ಳಬೇಕು. ಅದಾಗದಿದ್ದಲ್ಲಿ ಸಂಸದ, ಶಾಸಕ ಸ್ಥಾನಕ್ಕೆ ಅವರಿಬ್ಬರು ರಾಜಿನಾಮೆ ಸಲ್ಲಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸುತ್ತದೆ. ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ತೆರವಿಗೆ ಸಂಬಂಧಿಸಿ ಮುಂದಿನ ದಿನಗಳಲ್ಲಿ ನಾಗರಿಕ ಸಂಘಟನೆಗಳನ್ನು ಜೊತೆ ಸೇರಿಸಿ ಮತ್ತಷ್ಟು ತೀವ್ರ ಹೋರಾಟಗಳನ್ನು ಸಂಘಟಿಸಲಿದೆ ಎಂದರು.

ಹೋರಾಟಗಾರರು ಹಣ ಪಡೆದಿರುವ ಆರೋಪಕ್ಕೆ ಸಾಕ್ಷ್ಯ ಒದಗಿಸಿ. ಇಲ್ಲವೆ ಬಹಿರಂಗ ಕ್ಷಮೆ ಯಾಚಿಸಿ. ಶಾಸಕ ಭರತ್ ಶೆಟ್ಟಿಗೆ ಹೋರಾಟ ಸಮಿತಿ ಆಗ್ರಹ

ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟಗಾರರು ಹಣ ಪಡೆದಿದ್ದಾರೆ. ಕಮೀಷನ್ ಪಡೆಯುವ ನಕಲಿ ಹೋರಾಟಗಾರರು ಎಂದು ಮಂಗಳೂರು ನಗರ ಉತ್ತರ ಶಾಸಕ ಭರತ್ ಶೆಟ್ಟರು ಬಾಲಿಶ ಆರೋಪ ಹೊರಿಸಿರುವುದು ಹೋರಾಟದ ತೀವ್ರತೆಯಿಂದ ಅವರು ಹತಾಶಗೊಂಡಿರುವುದನ್ನು ಎತ್ತಿ ತೋರಿಸುತ್ತದೆ. ಯಾವುದೇ ಆಧಾರ ಇಲ್ಲದೆ ಓರ್ವ ಜನಪ್ರತಿನಿಧಿ ಇಂತಹ ಗಂಭೀರ ಆರೋಪ ಹೊರಿಸುವುದು ಖಂಡನಾರ್ಹ. ಶಾಸಕರು ತಮ್ಮ ಆರೋಪಕ್ಕೆ ಸಾಕ್ಷ್ಯ ಒದಗಿಸಬೇಕು. ಹಣ ಪಡೆದವರ, ಹಣ ನೀಡಿದವರ ಗುರುತು ಬಹಿರಂಗ ಪಡಿಸಬೇಕು. ಅದು ಸಾಧ್ಯವಾಗದಿದ್ದಲ್ಲಿ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಆಗ್ರಹಿಸಿದೆ.

ಶಾಸಕರು ತಾನೇ ಸ್ವತಹ ಟೋಲ್ ಗೇಟ್ ವಿರುದ್ದ ಹೋರಾಟ ನಡೆಸುವುದಾಗಿ ಹೇಳಿದ್ದಾರೆ. ಶಾಸಕರು ಟೋಲ್ ತೆರವು ಹೋರಾಟದ ನೇತೃತ್ವ ವಹಿಸುವುದಾದರೆ ಹೋರಾಟ ಸಮಿತಿ ಅವರೊಂದಿಗೆ ಕೈ ಜೋಡಿಸಲಿದೆ. ಆದರೆ ಶಾಸಕರು ಪ್ರತಿಭಟನೆ ನಡೆಸುವುದು ಯಾರ ವಿರುದ್ದ ಎಂದು ಸ್ಪಷ್ಟ ಪಡಿಸಲಿ. ಮಂಗಳೂರು ಪಾಲಿಕೆಯಿಂದ ಹಿಡಿದು ಕೇಂದ್ರ ಸರಕಾರದ ವರಗೆ ಅವರದ್ದೇ ಪಕ್ಷ ಅಧಿಕಾರದಲ್ಲಿರುವಾಗ ಅವಳಿ ಜಿಲ್ಲೆಗಳ ಶಾಸಕರು, ಸಂಸದರು ಅದೇ ಪಕ್ಷಕ್ಕೆ ಸೇರಿರುವಾಗ ಒಂದು ಅಕ್ರಮ ಟೋಲ್ ಗೇಟ್ ಮುಚ್ಚಿಸಲು ಅಸಾಧ್ಯವಾಗಲು ಕಾರಣ ಏನು ಎಂಬುದಕ್ಕೂ ಶಾಸಕರು ಉತ್ತರ ನೀಡಲಿ. ಹೋರಾಟಗಾರರ ಮೇಲೆ ಆರೋಪ ಹೊರಿಸುವ ಮುನ್ನ ಟೋಲ್ ಸಂಗ್ರಹದ ಗುತ್ತಿಗೆದಾರರು, ಉಪ ಗುತ್ತಿಗೆದಾರರು, ಟೋಲ್ ಗೇಟ್ ನಿರ್ವಹಣೆಯ ಜವಾಬ್ದಾರಿ ಹೊತ್ತವರು ಯಾವ ಪಕ್ಷಕ್ಕೆ ಸೇರಿದವರು, ಯಾವ ನಾಯಕರ ಹಿಂಬಾಲಕರು ಎಂಬುದನ್ನೂ ಶಾಸಕ ಭರತ್ ಶೆಟ್ಟಿ ಬಹಿರಂಗ ಪಡಿಸಲಿ ಎಂದು ಹೋರಾಟ ಸಮಿತಿ ಶಾಸಕರಿಗೆ ಸವಾಲು ಹಾಕಿದೆ.

ಪತ್ರಿಕಾಗೋಷ್ಟಿಯಲ್ಲಿ ಮುನೀರ್ ಕಾಟಿಪಳ್ಳ, ಪುರುಷೋತ್ತಮ ಚಿತ್ರಾಪುರ, ಎಂ ದೇವದಾಸ್, ದಿನೇಶ್ ಹೆಗ್ಡೆ ಉಳೆಪಾಡಿ, ವೈ ರಾಘವೇಂದ್ರ ರಾವ್, ರಮೇಶ್ ಕೋಟ್ಯಾನ್, ದಿನೇಶ್ ಕುಂಪಲ, ಬಿ.ಕೆ. ಇಮ್ತಿಯಾಜ್, ಪ್ರತಿಭಾ ಕುಳಾಯಿ, ಶೇಖರ ಹೆಜಮಾಡಿ, ಮೂಸಬ್ಬ ಪಕ್ಷಿಕರೆ, ರಘು ಎಕ್ಕಾರು, ಟಿ.ಎನ್. ರಮೇಶ್, ಶ್ರೀನಾಥ್ ಕುಲಾಲ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.



Join Whatsapp