ಕುಜ ದೋಷವೆಂದು ಮದುವೆ ನಿರಾಕರಣೆ: ಮಹಿಳಾ ಪೊಲೀಸ್ ಆತ್ಮಹತ್ಯೆ

Prasthutha|

ಶಿವಮೊಗ್ಗ: ಮದುವೆಗೆ ಜಾತಕ ತೋರಿಸಿದ ಸಂದರ್ಭದಲ್ಲಿ ಹುಡುಗಿಗೆ ಕುಜ ದೋಷವಿದೆ  ಎಂದು ತಿಳಿದು ಪ್ರಿಯಕರನ ತಾಯಿ ಮದುವೆಗೆ ನಿರಾಕರಿಸಿದ್ದು, ಮನನೊಂದ ಪ್ರಿಯತಮೆ ಮಹಿಳಾ ಕಾನ್ಸ್ ಟೇಬಲ್ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.

- Advertisement -

ಸುಧಾ ಮೃತ ಮಹಿಳೆ ಎಂದು ಗುರುತಿಸಲಾಗಿದೆ.

ಭದ್ರಾವತಿ ತಾಲೂಕಿನ ಕಲ್ಲಾಪುರ ನಿವಾಸಿಯಾಗಿರುವ ಪೊಲೀಸ್ ಕಾನ್ಸ್ ಟೇಬಲ್ ಸುಧಾ ಹಾಗೂ ಭದ್ರಾವತಿ ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿ ಮೂಲದ ಪ್ರವೀಣ್ ಆರು ವರ್ಷಗಳಿಂದ  ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಪ್ರೀತಿಗೆ ಹೆತ್ತವರ ವಿರೋಧವಿತ್ತು. ಆರಂಭದಲ್ಲಿ ಪ್ರೀತಿಗೆ ಜಾತಿ ಅಡ್ಡಿಯಾಗಿತ್ತು. ಆದರೆ ಜಾತಿ ಅಡ್ಡಿಯ ನಡುವೆಯೂ ಇಬ್ಬರು ಮದುವೆಗೆ ಸಿದ್ಧರಾಗಿದ್ದರು. ಇದರ ಮಧ್ಯೆ ಪ್ರವೀಣ್ ತಾಯಿ ಯುವತಿಯ ಜಾತಕವನ್ನು ಜ್ಯೋತಿಷಿಯೊಬ್ಬರಿಗೆ ತೋರಿಸಿದ್ದರು. ಜ್ಯೋತಿಷಿ ಈ ಯುವತಿಗೆ ಕುಜ ದೋಷ ಇದೆ. ಇವಳೊಂದಿಗೆ ವಿವಾಹವಾದರೆ ನಿಮ್ಮ ಮಗನ ಆಯಸ್ಸು ಕಡಿಮೆ ಎಂದಿದ್ದಾರೆ.  ಹೀಗಾಗಿ ಕುಜ ದೋಷ ಇರುವ ಹುಡುಗಿ ಜೊತೆ ಮದುವೆ ಮಾಡಲು ಸಾಧ್ಯವಿಲ್ಲ ಎಂದು ಪ್ರವೀಣ್ ತಾಯಿ ತಿಳಿಸಿದ್ದರು. ಅಲ್ಲದೆ, ಯುವತಿ ಸುಧಾಳಿಗೂ ಫೋನ್ ಮಾಡಿ ನನ್ನ ಮಗನ ಸಹವಾಸ ಬಿಟ್ಟು ಬಿಡು. ಈ ಮದುವೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದರಿಂದ ಮನನೊಂದ ಪ್ರೇಮಿಗಳು ಮೇ.31ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ನಂತರ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ತೀವ್ರವಾಗಿ ಅಸ್ವಸ್ಥಗೊಂಡಿದ್ದ ಸುಧಾ ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.



Join Whatsapp