ಬೆಂಗಳೂರು: ಕೇಂದ್ರ ಸರಕಾರ ಜಾರಿಗೆ ತಂದಿರುವ ‘ಅಗ್ನಿಪಥ’ ಯೋಜನೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಕೇಂದ್ರದ ವಿರುದ್ಧ ಸೇನಾ ನೇಮಕಾತಿಗಳು ಪ್ರತಿಭಟನೆಗಿಳಿದಿದ್ದು, ಹಿಂಸಾಚಾರಕ್ಕೂ ಕಾರಣವಾಗಿದೆ. ಇದೀಗ ಅಗ್ನಿಪಥ ಯೋಜನೆಗೆ ಬೆಂಬಲ ಸೂಚಿಸಿರುವ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ, ಯೋಜನೆಯಿಂದ ಪೊಲೀಸ್ ಇಲಾಖೆಗೂ ನೇಮಿಸಿಕೊಳ್ಳಬಹುದು ಎಂದಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಅಗ್ನಿಪಥ’ ಕೇಂದ್ರ ಸರ್ಕಾರದ ಉತ್ತಮ ಯೋಜನೆಯಾಗಿದ್ದು. ಕೆಲವು ವರ್ಗಗಳು ಇದರ ಬಗ್ಗೆ ಪ್ರತಿಭಟನೆ, ಅಪಪ್ರಚಾರ ಮಾಡುತ್ತಿದೆ. ಈ ಯೋಜನೆ ಜಾರಿಯಾಗುವ ಮೊದಲೇ ಇಷ್ಟೆಲ್ಲಾ ಪ್ರತಿಭಟನೆ, ವಿರೋಧ ಏಕೆ ಎಂದು ಜ್ಞಾನೇಂದ್ರ ಪ್ರಶ್ನಿಸಿದ್ದಾರೆ.
ದೇಶದಲ್ಲಿ ನಾಲ್ಕು ವರ್ಷದ ತರಬೇತಿಯನ್ನು ಅಗ್ನಿಪಥ ಯೋಜನೆಯಡಿ ನೀಡಲಾಗುತ್ತದೆ. ಈ ವೇಳೆ ವೇತನ, ನಾಲ್ಕನೇ ವರ್ಷದಲ್ಲಿ ನಿವೃತ್ತಿಯಾದ ನಂತರ ಪ್ರೋತ್ಸಾಹಕ ಧನ, ಶೇಕಡಾ 25ರಷ್ಟು ಜನರನ್ನು ಮಿಲಿಟರಿಗೆ ತೆಗೆದುಕೊಳ್ಳಲಾಗುತ್ತದೆ. ಅಲ್ಲದೆ ನಾಲ್ಕು ವರ್ಷ ತರಬೇತಿ ಪಡೆದವರನ್ನು ಪೊಲೀಸ್ ಇಲಾಖೆಗೂ ಸೇರಿಸಲು ಅನುಕೂಲವಾಗುತ್ತದೆ, ಇದರಿಂದ ಲಕ್ಷಾಂತರ ಯುವಕರಿಗೆ ಉದ್ಯೋಗವೂ ದೊರಕುತ್ತದೆ ಎಂದು ಕೇಂದ್ರದ ಪರ ಬ್ಯಾಟ್ ಬೀಸಿದ್ದಾರೆ.