ನವದೆಹಲಿ: ರಸಗೊಬ್ಬರ ಹಗರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಅವರ ಸಹೋದರನ ಜೋಧ್ ಪುರದಲ್ಲಿರುವ ನಿವಾಸ ಸೇರಿದಂತೆ ಅನೇಕ ಸ್ಥಳಗಳಲ್ಲಿ ಕೇಂದ್ರೀಯ ತನಿಖಾ ದಳ (ಸಿಬಿಐ) ಶೋಧ ನಡೆಸಿದೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶುಕ್ರವಾರ ಬೆಳಿಗ್ಗೆ, ಸಿಬಿಐ ತಂಡವು ಮುಖ್ಯಮಂತ್ರಿ ಗೆಹ್ಲೋಟ್ ಅವರ ಸಹೋದರ ಅಗ್ರಸೇನ್ ಗೆಹ್ಲೋಟ್ ಅವರ ಜೋಧಪುರದಲ್ಲಿರುವ ನಿವಾಸಕ್ಕೆ ಶೋಧಕ್ಕಾಗಿ ಆಗಮಿಸಿದೆ.
ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಹೋದರ ಅಗ್ರಸೇನ್ ಗೆಹ್ಲೋಟ್ ರಸಗೊಬ್ಬರ ವ್ಯಾಪಾರಿಯಾಗಿದ್ದಾರೆ.
ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ 2007 ಮತ್ತು 2009 ರ ನಡುವೆ ದೊಡ್ಡ ಪ್ರಮಾಣದ ಮ್ಯೂರಿಯಟ್ ಆಫ್ ಪೊಟ್ಯಾಷ್ (ಎಂಒಪಿ) ಅನ್ನು ವಿದೇಶಗಳಿಗೆ ಸಬ್ಸಿಡಿ ದರದಲ್ಲಿ ರಫ್ತು ಮಾಡಿದ ಆರೋಪ ಮೇಲೆ ಸಿಬಿಐ ದಾಳಿ ನಡೆಸಿದೆ. ಈ ಹಿಂದೆ, ಇಡಿ 2020 ರಲ್ಲಿ ಸಹ ದಾಳಿಗಳನ್ನು ನಡೆಸಿತ್ತು.
ಜೋಧಪುರದಲ್ಲಿರುವ ಅಗ್ರಸೇನ್ ಗೆಹ್ಲೋಟ್ ಅವರ ನಿವಾಸ ಮತ್ತು ರಾಜಸ್ಥಾನದ ಇತರ ಸ್ಥಳಗಳಲ್ಲಿ ಸಿಬಿಐ ದಾಳಿಗಳು ಇನ್ನೂ ನಡೆಯುತ್ತಿವೆ.