ಹಾಸನ | ಇಡಿ ವಿಚಾರಣೆಗೆ ಖಂಡನೆ: ಕಾಂಗ್ರೆಸ್ ಬೃಹತ್ ಪ್ರತಿಭಟನೆ

Prasthutha|

ಹಾಸನ: ಇಡಿ ವಿಚಾರಣೆ ನೆಪದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸರ್ಕಾರ ಅನಗತ್ಯ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ಡಿಸಿಸಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು, ಇದಕ್ಕೂ ಮುನ್ನ ಎನ್.ಆರ್.ವೃತ್ತದಲ್ಲಿ ಕೆಲಹೊತ್ತು ಧರಣಿ ನಡೆಸಿ ಟೈರ್‌ ಗೆ ಬೆಂಕಿ ಹಚ್ಚಿ ಕೇಂದ್ರದ ನಡೆಯನ್ನು ತೀವ್ರವಾಗಿ ಖಂಡಿಸಿದರು.

- Advertisement -

ನಂತರ ಜಿಲ್ಲಾಧಿಕಾರಿ ಕಚೇರಿಗೆ ಹೋಗುವ ಸಂದರ್ಭದಲ್ಲಿ ಬಿಎಂ ರಸ್ತೆಯಲ್ಲಿ ಕೆಲವರು ಪಕ್ಷದ ಬಾವುಟ ಹಿಡಿದು ಸಾರಿಗೆ ಬಸ್‌ ಗೆ ಅಡ್ಡ ಮಲಗಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಅವರನ್ನು ಮೇಲೇಳಿಸಲು ಹೋದ ಪೊಲೀಸರೊಂದಿಗೆ ಸಣ್ಣ ವಾಗ್ವಾದವೂ ನಡೆಯಿತು. ಈ ವೇಳೆ ರಸ್ತೆ ಸಂಚಾರ ಮುಕ್ತ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು. ಕೊನೆಗೆ ಮಲಗಿದ್ದವರನ್ನು ರಸ್ತೆ ಬದಿಗೆ ಎಳೆದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಈ ವೇಳೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಇಡಿ, ಐಟಿ, ಸಿಬಿಐ ಮೊದಲಾದ ಸ್ವತಂತ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ವಿರೋಧ ಪಕ್ಷಗಳನ್ನು ರಾಜಕೀಯವಾಗಿ ಹಣಿಯುವ ದುರುದ್ದೇಶದ ಕೆಲಸ ಮಾಡುತ್ತಿದೆ ಎಂದು ಪ್ರತಿಭಟಕಾರರು ಕಿಡಿ ಕಾರಿದರು.

- Advertisement -

ಇದೊಂದು ಅಸಂವಿಧಾನಿಕ ನಡೆಯಾಗಿದ್ದು, ತನಿಖಾ ಸಂಸ್ಥೆಗಳ ಅಧಿಕಾರಿಗಳೂ ಸಹ ಕೇಂದ್ರದ ಕೈಗೊಂಬೆಗಳಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ಅಧಿಕಾರಕ್ಕೆ ಬರುವ ಮುನ್ನ ನಿರುದ್ಯೋಗ ಸಮಸ್ಯೆ ನಿವಾರಣೆ, ಕಪ್ಪುಹಣ ವಾಪಸ್ ಸೇರಿದಂತೆ ಹಲವು ಭರವಸೆಗಳನ್ನು ನೀಡಿದ್ದ ಮೋದಿ ಅವರು, ನುಡಿದಂತೆ ನಡೆಯಲು ವಿಫಲರಾಗಿದ್ದಾರೆ. ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನ ಮುಖಿಯಾಗಿದೆ. ಜನಪರ ಆಡಳಿತ ನೀಡುವ ಬದಲು ಸಮುದಾಯಗಳನ್ನು ಎತ್ತಿಕಟ್ಟುವ, ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತುವ ಮೂಲಕ ದೇಶದಲ್ಲಿ ಶಾಂತಿ, ಸಾಮರಸ್ಯ ಕದಡುವ ಕೆಲಸ ಮಾಡುತ್ತಿದ್ದಾರೆ. ತಮ್ಮ ವೈಫಲ್ಯಗಳ ವಿರುದ್ಧ ದನಿ ಎತ್ತುತ್ತಿರುವ ವಿಪಕ್ಷಗಳ ನಾಯಕರ ಬಾಯಿ ಮುಚ್ಚಿಸಲು ಇಡಿ, ಐಟಿ ಅಸ್ತ್ರ ಬಳಕೆ ಮಾಡಲಾಗುತ್ತಿದೆ. ಇದು ಪ್ರಜಾಪ್ರಭುತ್ವ ವಿರೋಧಿ ಎಂದು ಆಕ್ರೋಶ ಹೊರ ಹಾಕಿದರು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿ ಕುಟುಂಬಕ್ಕೆ ತೊಂದರೆ ನೀಡುತ್ತಿರುವುದರ ವಿರುದ್ಧ ಇದು ಆರಂಭದ ಹೋರಾಟ. ಬಿಜೆಪಿ ತನ್ನ ರಾಜಕೀಯ ಹಗೆತನ ನಿಲ್ಲಿಸದೇ ಹೋದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ಈಗಾಗಲೇ ವಿಚಾರಣೆ ಮುಗಿದಿರುವ ಪ್ರಕರಣವನ್ನು ಮತ್ತೆ ಕೆದಕುವ ಮೂಲಕ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿರುವುದು ಕಾನೂನು ವಿರೋಧಿ ಚಟುವಟಿಕೆ ಎಂದು ದೂರಿದರು. ಬಿಜೆಪಿ ಭ್ರಷ್ಟಾಚಾರ, ದುರಾಡಳಿತ ಪ್ರಶ್ನೆ ಮಾಡಿದವರ ಬಾಯಿ ಮುಚ್ಚಿಸುವ, ಪ್ರತಿಭಟನೆ ಹತ್ತಿಕ್ಕುವ ಕೆಲಸ ನಡೆಯುತ್ತಿದೆ ಎಂದು ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಾವಗಲ್ ಮಂಜುನಾಥ್, ಮಾಜಿ ಎಂಎಲ್‌ಸಿ ಗೋಪಾಲಸ್ವಾಮಿ, ಮಾಜಿ ಶಾಸಕ ಸಿ.ಎಸ್. ಪುಟ್ಟೇಗೌಡ, ಮುಖಂಡರಾದ ಹೆಚ್.ಕೆ. ಮಹೇಶ್, ದೇವರಾಜೇಗೌಡ, ಬನವಾಸೆ ರಂಗಸ್ವಾಮಿ, ಬಿ.ಪಿ. ಮಂಜೇಗೌಡ, ದಿನೇಶ್ ಭೈರೇಗೌಡ, ತಾರಾ ಚಂದನ್, ಶೃತಿ, ಎಂ.ಕೆ. ಶೇಷೆಗೌಡ, ರಘು,  ರಂಜಿತ್, ಪ್ರಸನ್ನ, ವಿನಯ್ ಗಾಂಧಿ ಇತರಿದ್ದರು.



Join Whatsapp