ಹಾಸನ: ಕಾಫಿ ಬೋರ್ಡ್ ನೌಕರನ ಬರ್ಬರ ಕೊಲೆ

Prasthutha|

ಸಕಲೇಶಪುರ: ಕಾಫಿ ಬೋರ್ಡ್ ವೊಂದರಲ್ಲಿ ನೌಕರನಾಗಿದ್ದ ದಲಿತ ವ್ಯಕ್ತಿಯನ್ನು ಕಳೆದ ರಾತ್ರಿ ಬರ್ಬರವಾಗಿ ಹತ್ಯೆಗೈದ  ಘಟನೆ ತಾಲೂಕಿನ ಮಠಸಾಗರ ಬಳಿ ನಡೆದಿದೆ.

- Advertisement -

ಮಠಸಾಗರ ಗ್ರಾಮದ ಎ.ಸ್ವಾಮಿ (49) ಕೊಲೆಯಾದ ದುರ್ದೈವಿ  ಎಂದು ಗುರುತಿಸಲಾಗಿದೆ.

ಕಳೆದ 25 ವರ್ಷಗಳಿಂದ ಕಾಫಿ ಮಂಡಳಿಯಲ್ಲಿ ನೌಕರನಾಗಿ ಕಾರ್ಯನಿರ್ವಹಿಸುತ್ತಿದ್ದ ಸ್ವಾಮಿ, ನಿತ್ಯವೂ ಕೆಲಸಕ್ಕೆ ಹೋಗಿ ಬರುತ್ತಿದ್ದರು. ನಿನ್ನೆ ಬೆಳಗ್ಗೆ ಎಂದಿನಂತೆ ಕಾಫಿ ಬೋರ್ಡ್ ಗೆ  ಕೆಲಸಕ್ಕೆ ಹೋಗಿದ್ದರು. ಈ ನಡುವೆ ಮಠಸಾಗರ ಗ್ರಾಮದ ಸುನಿಲ್ ಜೋಸೆಫ್ ಎಂಬವರು ಮೃತಪಟ್ಟ ಹಿನ್ನೆಲೆ ಮಧ್ಯಾಹ್ನವೇ ಮನೆಗೆ ಬಂದಿದ್ದರು.

- Advertisement -

ರಾತ್ರಿ ಮನೆಯಲ್ಲಿ ಊಟ ಮುಗಿಸಿ, ರಾತ್ರಿ 11 ಗಂಟೆ ಸುಮಾರಿಗೆ ಮನೆಯಿಂದಲೇ ಹೊದಿಕೆ ತೆಗೆದುಕೊಂಡು ಸುನಿಲ್ ಜೋಸೆಫ್ ಮೃತದೇಹ ಇದ್ದ ಮನೆಯ ಹತ್ತಿರ ಮಲಗುವುದಾಗಿ ಹೇಳಿ ತೆರಳಿದ್ದರು.ಆದರೆ ಬೆಳಗಾಗುವುದರೊಳಗೆ ಬರ್ಬರವಾಗಿ ಹತ್ಯೆಯಾಗಿದ್ದಾರೆ ಎನ್ನಲಾಗಿದೆ.

ಬೆಳಗ್ಗೆ 6.30 ರ ಹೊತ್ತಿಗೆ ಸುನಿಲ್ ಜೋಸೆಫ್ ಅವರ ಶವ ಸಂಸ್ಕಾರ ಕೆಲಸ ಮಾಡಲು ಹೋಗುತ್ತಿದ್ದ ಗ್ರಾಮಸ್ಥರಿಗೆ ಸ್ವಾಮಿ ಹೆಣವಾಗಿ ಬಿದ್ದಿರುವುದು ಕಂಡು ಬಂದಿದೆ. ಗ್ರಾಮದ ಹಳೇ ಬಾಗೆ ಮತ್ತು ಬಾಳ್ಳುಪೇಟೆಗೆ ಹೋಗುವ ರಸ್ತೆಯ ಬದಿ ಸನ್ ವಾಲೆ ಎಸ್ಟೇಟ್ ಕಡೆಯ ಚರಂಡಿಯಲ್ಲಿ ಸ್ವಾಮಿ ಅವರ ಮೃತದೇಹ ರಕ್ತಸಿಕ್ತವಾಗಿ ಬಿದ್ದಿತ್ತು. ಮಾರಕಾಸ್ತ್ರಗಳಿಂದ ಕೊಚ್ಚಿ ಮುಖದ ಗುರುತು ಸಿಗದಂತೆ ಕೊಲೆಗೈದು ಹಂತಕರು ಪರಾರಿಯಾಗಿದ್ದಾರೆ.

ಮೈಮೇಲೆ ಒಳ ಉಡುಪು ಬಿಟ್ಟು ಬೇರೆ ಯಾವುದೇ ಬಟ್ಟೆ ಇರಲಿಲ್ಲ. ಮೃತ ದೇಹ ಬಿದ್ದಿದ್ದ ಅನತಿ ದೂರದಲ್ಲಿ ಅವರು ಧರಿಸಿದ್ದ ಟವೆಲ್ ಮತ್ತು ಪಂಚೆ ಹಾಗೂ ಹೊದಿಕೆ ಬಿದ್ದಿತ್ತು.

ಘಟನೆ ಬಗ್ಗೆ ಮಾತನಾಡಿದ ಸ್ವಾಮಿ ಅವರ ಪುತ್ರ ಪ್ರವೀಣ್‌ಕುಮಾರ್, ನಮ್ಮ ತಂದೆ ತುಂಬಾ ಸೌಮ್ಯ ಸ್ವಭಾವದವರಾಗಿದ್ದು, ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆಯ ನಡುವೆ ಯಾರೋ ದುಷ್ಕರ್ಮಿಗಳು ಯಾವುದೋ ದ್ವೇಷಕ್ಕಾಗಿ ನಮ್ಮ ತಂದೆಯ ತಲೆಗೆ ಹೊಡೆದು, ಕೊಲೆ ಮಾಡಿ ಬಿಸಾಕಿ ಹೋಗಿದ್ದಾರೆ. ಕೊಲೆಗಾರರನ್ನು ಪತ್ತೆ ಮಾಡಿ, ಕಾನೂನು ಕ್ರಮ ಜರುಗಿಸಬೇಕೆಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಸುದ್ದಿ ತಿಳಿದು ನಗರಠಾಣೆ ಪೊಲೀಸರು ಶ್ವಾನದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ವಾಮಿ ಅವರ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ ಹಳೇ ದ್ವೇಷದಿಂದ ಈ ಕೃತ್ಯ ನಡೆದಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.



Join Whatsapp